ಬ್ರಹ್ಮಾವರ ಅಕ್ಟೋಬರ್ 27: ತಾಲೂಕಿನ ಕಾವಡಿ ಗ್ರಾಮದ ಹವರಾಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ಅಕ್ಟೋಬರ್ 26 ರಂದು ಬೆಳಕಿಗೆ ಬಂದಿದೆ. ದೇವಸ್ಥಾನದ ಹಿಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ತಾಮ್ರ ಹಾಗೂ ಹಿತ್ತಾಳೆಯ ಪೂಜಾ ಸಾಮಗ್ರಿಗಳು ಮತ್ತು ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ವಸ್ತುಗಳು ಹಾಗೂ ನಗದು ಸೇರಿ ಒಟ್ಟು ಅಂದಾಜು ₹60,000 ಮೌಲ್ಯದ ಸ್ವತ್ತು ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಕಾವಾಡಿ ಗ್ರಾಮದ ನಿವಾಸಿ, ದೇವಸ್ಥಾನದ ಟ್ರಸ್ಟಿ ಅವರು ಈ ಬಗ್ಗೆ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 26ರಂದು ಬೆಳಿಗ್ಗೆ ಸುಮಾರು 7 ಗಂಟೆಗೆ ದೇವಸ್ಥಾನದ ಅರ್ಚಕರ ಪತ್ನಿ ಅವರು ಕರೆ ಮಾಡಿ, ದೇವಸ್ಥಾನದ ಹಿಂದಿನ ಬಾಗಿಲು ತೆರೆದಿದ್ದು, ಪೂಜಾ ಸಾಮಗ್ರಿಗಳು ಹಾಗೂ ಕಾಣಿಕೆ ಹುಂಡಿ ಕಳವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ಕೂಡಲೇ ದೇವಸ್ಥಾನಕ್ಕೆ ಆಗಮಿಸಿದ ಉದಯ ಚಂದ್ರ ಶೆಟ್ಟಿ ಅವರು ಪರಿಶೀಲಿಸಿದಾಗ, ದೇವಸ್ಥಾನದ ಹಿಂದಿನ ಬಾಗಿಲು ಮುರಿದಿರುವುದು ಕಂಡುಬಂದಿದೆ. ಒಳಗೆ ಪರಿಶೀಲಿಸಿದಾಗ ಐದು ತಾಮ್ರದ ಕೊಡಪಾನಗಳು, ನಾಲ್ಕು ತಾಮ್ರದ ಹರಿವಾಣಗಳು, ಮೂರು ತಾಮ್ರದ ಚಂಬುಗಳು, ಒಂದು ಹಿತ್ತಾಳೆಯ ಹರಿವಾಣ ಹಾಗೂ ಕಾಣಿಕೆ ಹುಂಡಿ ಕಳವಾಗಿರುವುದು ತಿಳಿದುಬಂದಿದೆ. ಕಾಣಿಕೆ ಹುಂಡಿಯಲ್ಲಿ ಸುಮಾರು ₹40,000ದಿಂದ ₹45,000 ನಗದು ಇರಬಹುದೆಂದು ಅಂದಾಜಿಸಲಾಗಿದೆ.
ಅಕ್ಟೋಬರ್ 25ರಂದು ಸಂಜೆ ಸುಮಾರು 6.30ಕ್ಕೆ ಪೂಜೆ ಮುಗಿಸಿ ದೇವಸ್ಥಾನದ ಬಾಗಿಲು ಹಾಕಿಕೊಂಡು ತೆರಳಿದ್ದರು. ಅಂದಿನಿಂದ ಅಕ್ಟೋಬರ್ 26ರ ಬೆಳಿಗ್ಗೆ 7 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿ ಕಳವು ಎಸಗಿರುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 165/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 331(4) ಮತ್ತು 305ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

