ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಆನ್ಲೈನ್ ಶಾಪಿಂಗ್ ಸಂಸ್ಥೆಗಳು ಹಾಗೂ ವಿವಿಧ ಕಂಪನಿಗಳು ಗ್ರಾಹಕರನ್ನು ಆಕರ್ಷಿಸಲು ವಿಶೇಷ ಆಫರ್ಗಳು ಮತ್ತು ಭರ್ಜರಿ ರಿಯಾಯಿತಿಗಳನ್ನು ಘೋಷಿಸುತ್ತಿವೆ. ಆದರೆ ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ವಂಚಕರು, ನಕಲಿ ಸಂದೇಶಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ ಜಾಲವನ್ನು ಸಕ್ರಿಯಗೊಳಿಸಿದ್ದಾರೆ.
ದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ವಾಟ್ಸಾಪ್ ಮೂಲಕ ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ನಕಲಿ ಆಫರ್ ಲಿಂಕ್ಗಳನ್ನು ಕಳುಹಿಸಿ ಹಣ ಲೂಟಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಏರ್ಟೆಲ್ ಕಂಪನಿಯ ಹೆಸರಿನಲ್ಲಿ ₹2,000 ಉಚಿತ ನಗದು ನೀಡುವುದಾಗಿ ಆಮಿಷವೊಡ್ಡುವ ಸಂದೇಶಗಳು ವಾಟ್ಸಾಪ್ನಲ್ಲಿ ಹರಿದಾಡುತ್ತಿದ್ದು, ಬಳಕೆದಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಏನಿದು ದೀಪಾವಳಿ ಆಫರ್ ವಂಚನೆ?
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಳ್ಳುವ ಮೂಲಕ ಈ ವಂಚನೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸಾಪ್ಗೆ ಬರುವ ಸಂದೇಶಗಳಲ್ಲಿ ‘ಏರ್ಟೆಲ್ – ದೀಪಾವಳಿ ಕಾ ತ್ಯೋಹಾರ್’ ಎಂಬ ಹೆಸರಿನಲ್ಲಿ ಆಫರ್ ಘೋಷಿಸಲಾಗುತ್ತಿದೆ. ‘ನನಗೆ ಈ ಲಿಂಕ್ ಮೂಲಕ ₹2,000 ಹಣ ಬಂದಿದೆ. ನೀವೂ ಲಿಂಕ್ ಕ್ಲಿಕ್ ಮಾಡಿ ಹಣ ಪಡೆದುಕೊಳ್ಳಿ’ ಎಂಬ ಸಂದೇಶದೊಂದಿಗೆ ನಕಲಿ ಲಿಂಕ್ಗಳನ್ನು ಕಳುಹಿಸಲಾಗುತ್ತಿದೆ.
ಉಚಿತವಾಗಿ ಹಣ ಸಿಗುತ್ತದೆ ಎಂಬ ಆಸೆಯಿಂದ ಯಾವುದೇ ಪರಿಶೀಲನೆ ನಡೆಸದೆ ಲಿಂಕ್ ಕ್ಲಿಕ್ ಮಾಡಿದರೆ ಸೈಬರ್ ವಂಚನೆಗೆ ಸಿಲುಕುವ ಅಪಾಯವಿದೆ. ಇಂತಹ ಲಿಂಕ್ಗಳ ಮೂಲಕ ವೈಯಕ್ತಿಕ ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಕದಿಯುವ ಸಾಧ್ಯತೆಯಿದ್ದು, ಬಳಕೆದಾರರು ಅತ್ಯಂತ ಜಾಗರೂಕರಾಗಿರಬೇಕು ಎಂದು ಎಚ್ಚರಿಸಲಾಗಿದೆ.
ವಂಚನೆಯಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಉಚಿತ ಹಣ, ಬಹುಮಾನ ಅಥವಾ ಉಡುಗೊರೆಗಳ ಆಮಿಷವಿರುವ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು. ಕಂಪನಿಗಳ ಹೆಸರಿನಲ್ಲಿ ಆಫರ್ ಸಂದೇಶಗಳು ಬಂದರೆ ಆಯಾ ಸಂಸ್ಥೆಗಳ ಅಧಿಕೃತ ವೆಬ್ಸೈಟ್ ಅಥವಾ ಆ್ಯಪ್ ಮೂಲಕವೇ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.
ಅನುಮಾನಾಸ್ಪದ ವೆಬ್ಸೈಟ್ಗಳಲ್ಲಿ ಬ್ಯಾಂಕ್ ಖಾತೆ ವಿವರ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ, ಯುಪಿಐ ಪಿನ್, ಪಾಸ್ವರ್ಡ್ ಹಾಗೂ ಒಟಿಪಿ (OTP) ಮಾಹಿತಿಯನ್ನು ಹಂಚಿಕೊಳ್ಳಬಾರದು. ಪರಿಶೀಲಿಸದ ಆಫರ್ ಸಂದೇಶಗಳನ್ನು ಸ್ನೇಹಿತರು ಹಾಗೂ ಕುಟುಂಬದವರಿಗೆ ಫಾರ್ವರ್ಡ್ ಮಾಡುವುದನ್ನೂ ತಪ್ಪಿಸಬೇಕು.
ಇಂತಹ ಅನುಮಾನಾಸ್ಪದ ಸಂದೇಶಗಳು ಬಂದರೆ ಸಂಬಂಧಪಟ್ಟ ಸಂಖ್ಯೆಯನ್ನು ವಾಟ್ಸಾಪ್ನಲ್ಲಿ ರಿಪೋರ್ಟ್ ಮಾಡಿ ಬ್ಲಾಕ್ ಮಾಡಬೇಕು. ಉಚಿತವಾಗಿ ಹಣ ನೀಡುವ ಆಮಿಷವೊಡ್ಡುವ ಸಂದೇಶಗಳನ್ನು ನಂಬುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ. ಹಬ್ಬದ ಸಂಭ್ರಮದ ನಡುವೆ ಸೈಬರ್ ವಂಚಕರ ಬಲೆಗೆ ಬೀಳದಂತೆ ಪ್ರತಿಯೊಬ್ಬರೂ ಡಿಜಿಟಲ್ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.

