ಮಂಗಳೂರು : ಬೈಕ್ ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡುತ್ತಿದ್ದ ಕುಖ್ಯಾತ ಸರಕಳ್ಳರಿಬ್ಬರನ್ನು ಕೃತ್ಯ ನಡೆದ 24 ಗಂಟೆಯೊಳಗೆ, ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಚಿನ್ನದ ಸರ ಹಾಗೂ ಕಳವುಗೈದ ಬೈಕ್ ನ್ನು ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ತೊಕ್ಕೋಟು ಬಳಿಯ ಚೆಂಬುಗುಡ್ಡೆಯಲ್ಲಿ ವಾಸವಾಗಿರುವ ಹಬೀಬ್ ಹಸನ್ ಯಾನೆ ಚೊಂಬುಗುಡ್ಡೆ ಹಬೀಬ್ ಯಾನೆ ಅಬ್ಬಿ (43) ಮತ್ತು ಬಂಟ್ವಾಳ ಬಿ. ಮೂಡ ಗ್ರಾಮದ ಪರ್ಲಿಯಾ ಕ್ರಾಸ್ ನಿವಾಸಿಯಾದ ಉಮ್ಮರ್ ಶಿಯಾಫ್ (29)ಬಂಧಿತ ಆರೋಪಿಗಳು.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಪ್ತಿಯ ಬೋಳ ಗ್ರಾಮದ ಸುಂಕಮಾರು- ಮಂಜರಪಲ್ಕೆ ಎಂಬಲ್ಲಿ ಡಿಸೆಂಬರ್ 9 ರಂದು ವಸಂತಿ ಎಂಬವರು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಬೈಕಿನಲ್ಲಿ ತೆರಳುತ್ತಿದ್ದ ಯುವಕ ಮತ್ತು ಯುವತಿ, ವಸಂತಿ ಅವರಲ್ಲಿ ಭಾಸ್ಕರ್ ಎಂಬವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳಿ ವಸಂತಿ ಅವರ ಗಮನ ಬೇರೆಡೆ ವರ್ಗಾಹಿಸಿ ಬೈಕ್ ಸವಾರನು ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಬಳಿಕ ಇಬ್ಬರೂ ಪರಾರಿಯಾಗಿದ್ದರು. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಬ್ಬರು ಮಂಗಳೂರಿನ ಕಾರ್ ಸ್ಟ್ರೀಟ್ ಬಳಿಯಲ್ಲಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳಿಬ್ಬರು 2 ತಿಂಗಳ ಹಿಂದೆಯಷ್ಟೆ ಮೂಡುಬಿದಿರೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಕಳ್ಳತನ ಮಾಡಿ ಮಂಗಳೂರು ಜೈಲಿನಲ್ಲಿದ್ದರು. ಡಿಸೆಂಬರ್ 6 ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು. ಅದೇ ದಿನದಂದು ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ, ತೌಡುಗೋಳಿಯಲ್ಲಿ ಮಹಿಳೆಯ ಸರ ಕಳ್ಳತನ, ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳವು ಮಾಡಿ ಅದೇ ಬೈಕ್ ನಲ್ಲಿ ಆರೋಪಿಯಾದ ಹಬೀಬ್ ತನ್ನ ಸ್ನೇಹಿತೆ ಮಹಿಳೆಯ ಜತೆಗೂಡಿ ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದನು.

