ಮುರುಡೇಶ್ವರ : ಮುರುಡೇಶ್ವರದಲ್ಲಿ ನಡೆದ ದುರ್ಘಟನೆಯಲ್ಲಿ ನೀರುಪಾಲಾದ ಮೃತ ವಿದ್ಯಾರ್ಥಿನಿಯರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ದೊರಕಿಸಬೇಕೆಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ಕೊತ್ತುರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸುಮಾರು 54 ವಿದ್ಯಾರ್ಥಿನಿಯರನ್ನು ಒಳಗೊಂಡು ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ಬಂದಿದ್ದರು. ಅಲೆಗಳ ಅಬ್ಬರವು ಹೆಚ್ಚಿದ್ದರೂ ಶಿಕ್ಷಕರು ಮುನ್ನೆಚ್ಚರಿಕೆಯನ್ನು ಕೈಗೊಳ್ಳದೆ ಮಕ್ಕಳನ್ನು ಸಮುದ್ರದಲ್ಲಿ ಆಡಲು ಬಿಟ್ಟಿದ್ದರಿಂದ ಅಲೆಗಳ ಹೊಡೆತಕ್ಕೆ 7 ವಿದ್ಯಾರ್ಥಿನಿಯರು ಮತ್ತು ಓರ್ವ ಶಿಕ್ಷಕ ನೀರುಪಾಲಾಗಿದ್ದರು. ಈ ಸಂದರ್ಭದ ಲೈಫ್ ಗಾರ್ಡಗಳು ಯಾವುದೇ ಪರಿಕರ ಇಲ್ಲದಿದ್ದರೂ 3 ಜನ ವಿದ್ಯಾರ್ಥಿನಿಯರನ್ನು ಮತ್ತು ಓರ್ವ ಶಿಕ್ಷಕನನ್ನು ರಕ್ಷಣೆ ಮಾಡಿದ್ದಾರೆ. ಆದರೂ ಈ ದುರ್ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮೂವರು ಸಮುದ್ರಪಾಲಾಗಿದ್ದಾರೆ.
9 ನೇ ತರಗತಿಯ ಶಾವಂತಿ (15) ಮೃತಪಟ್ಟಿರುವ ವಿದ್ಯಾರ್ಥಿನಿಯಾಗಿದ್ದು, ಮುಳಬಾಗಿಲಿನ ಯಶೋಧಾ, ವೀಕ್ಷಣಾ, ಲಿಪಿಕಾರನ್ನು ರಕ್ಷಿಸಲಾಗಿದೆ. ಇವರಲ್ಲಿ ಓರ್ವಳ ಸ್ಥಿತಿ ಗಂಭೀರವಾಗಿದ್ದು ಮೂವರಿಗೂ ಮುರುಡೇಶ್ವರದ ಆರ್ಎನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ದೀಕ್ಷಾ, ಲಾವಣ್ಯ, ವಂದನ ಸಮುದ್ರಪಾಲಾಗಿದ್ದು ಕಣ್ಮರೆಯಾಗಿದ್ದಾರೆ. ಇವರ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಕ್ಕಳ ಪೋಷಕರು ಮತ್ತು ಶಾಸಕರಾದ ಸಮೃದ್ಧಿ ಮಂಜುನಾಥ್ ಮುರುಡೇಶ್ವರ ತಲುಪಿದ್ದಾರೆ.
ಪ್ರಾಂಶುಪಾಲೆ ಅಮಾನತು, ಸಿಬ್ಬಂದಿ ವಜಾ :
ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಆರೋಪದ ಹಿನ್ನೆಲೆಯಲ್ಲಿ ಶಾಲಾ ಪ್ರಾಂಶುಪಾಲೆ ಶಶಿಕಲಾರನ್ನು ಅಮಾನತುಗೊಳಿಸಲಾಗಿದೆ. ಅಥಿತಿ ಉಪನ್ಯಾಕರು ಮತ್ತು ಡಿ ಗ್ರೂಪ್ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜು ಆದೇಶ ಹೊರಡಿಸಿದ್ದಾರೆ.
ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿನಿಯರು ಸಮುದ್ರಪಾಲಾದ ಹಿನ್ನಲೆಯಲ್ಲಿ ಮುರುಡೇಶ್ವರ ಬೀಚ್ ಗೆ ತೆರಳದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಲಾಗಿದೆ.

