ಮಂಗಳೂರು: ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಪಾಲ್ಗೊಂಡು ಸೌಹಾರ್ದ ಮೆರೆದಿದ್ದಾರೆ. ಅವರು ನದಿಗೆ ಇಳಿದು ಪವಿತ್ರ ನೀರನ್ನು ಚಿಮುಕಿಸಿಕೊಂಡರಲ್ಲದೆ, ದೋಣಿ ವಿಹಾರ ನಡೆಸಿ ಮಹಾಕುಂಭದ ಸೊಬಗನ್ನು ಸವಿದರು.

ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ಶುಕ್ರವಾರ ಕುಂಭಮೇಳದಲ್ಲಿ ಪಾಲ್ಗೊಂಡ ಖಾದರ್, ನಾಗಾಸಾಧುಗಳು ಮತ್ತು ಅಘೋರಿಗಳೊಂದಿಗೆ ಆಧ್ಯಾತ್ಮಿಕತೆ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಅವರು ಅಲಹಾಬಾದ್ನಲ್ಲಿ ಹಜರತ್ ಮಖ್ದೂಮ್ ಸಾದತ್ ಚೌಧೋನ್ ಪೀರೋ(ರ.ಅ) ದರ್ಗಾ ಶರೀಫ್ಗೂ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸ್ಪೀಕರ್ ಸತೀಶ್ ಮಹಾನಾ ಅವರ ಆಹ್ವಾನದ ಮೇರೆಗೆ ನಾನು ಮತ್ತು ಮಿತ್ರರು ಮಹಾಕುಂಭಮೇಳದಲ್ಲಿ ಪಾಲ್ಗೊಂಡಿದ್ದೇವೆ. ತುಂಬಾ ಖುಷಿಯಾಗಿದೆ. ಉತ್ತಮ ಅನುಭವ ಪಡೆದುಕೊಂಡೆ. ದೇಶದ ವಿವಿಧ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಅವಕಾಶ ಲಭಿಸಿತು. ಇದು ವಿಶ್ವಾಸಭರಿತ ಸಮಾಜ ನಿರ್ಮಾಣಕ್ಕೆ ಪೂರಕ ಎಂದು ಖಾದರ್ ಹೇಳಿದ್ದಾರೆ.

ಮಹಾಕುಂಭಮೇಳದಲ್ಲಿ ಹಿಂದೂ ವೇತರರೂ ಇದ್ದರು. ಅಂತೆಯೇ ದರ್ಗಾದಲ್ಲಿ ಹಿಂದೂಗಳೂ ಇದ್ದರು. ಅಲ್ಲಿಯೂ ಧಾರ್ಮಿಕ ಸೌಹಾರ್ದ ಕಾಣಲು ಸಾಧ್ಯವಾಯಿತು ಎಂದು ಖಾದರ್ ತಿಳಿಸಿದ್ದಾರೆ.

ಕುಂಭಮೇಳಕ್ಕೆ ತನ್ನನ್ನು ಆಹ್ವಾನಿಸಿದ ಉತ್ತರ ಪ್ರದೇಶದ ಸ್ಪೀಕರನ್ನು ಮಂಗಳೂರಿನಲ್ಲಿ ನಡೆಯುವ ಉರೂಸ್ನಲ್ಲಿ ಭಾಗವಹಿಸಲು ಆಹ್ವಾನಿಸಿದ್ದೇನೆ. ಸಾಂಸ್ಕೃತಿಕವಾಗಿ ವೈವಿಧ್ಯವಾಗಿರುವ ನಮ್ಮ ದೇಶದಲ್ಲಿ ಇಂತಹ ಭೇಟಿ, ಸೌಹಾರ್ದ ಅಗತ್ಯ ಎಂದು ಖಾದರ್ ಹೇಳಿದ್ದಾರೆ.

