ಉಡುಪಿ: ಪ್ರೇಮ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಬಿಡುಗಡೆಗೊಂಡಿದ್ದ ಯುವಕನ ಮೇಲೆ ಯುವತಿಯ ಮನೆಯವರು ಹಾಗೂ ಸಂಬಂಧಿಕರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಭವಿಸಿದೆ.
ಮೃತ ಯುವಕನನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತ, ಪೆರ್ಡೂರಿನ ಪ್ರದೀಪ್ ಪೂಜಾರಿ (28) ಎಂದು ಗುರುತಿಸಲಾಗಿದೆ.
ಪಾಡಿಗಾರ್ ಮೂಲದ ಯುವತಿಯ ಮೇಲೆ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಪ್ರದೀಪ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಯುವತಿಯ ಮನೆಯವರು ಹಾಗೂ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರದೀಪ್ ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದರಾದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.
ಪ್ರದೀಪ್ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರಿಂದ, ಆತನ ಸಾವಿನ ಸುದ್ದಿ ತಿಳಿದು ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಹರಿರಾಮ್ ಶಂಕರ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ.

