ಉಡುಪಿ: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಣೆಯಲ್ಲಿ ಸರ್ಕಾರದ ಬೇಜವಾಬ್ದಾರಿಯ ಎಡವಟ್ಟೊಂದು ಹೊರಬಿದ್ದಿದ್ದು, ಉಡುಪಿಯ ಖ್ಯಾತ ವೈದ್ಯ ಹಾಗೂ ಸಮಾಜ ಸೇವಕ ಡಾ. ಜಿ.ಎಸ್. ಚಂದ್ರಶೇಖರ್ ಅವರಿಗೆ ಪ್ರಶಸ್ತಿ ಘೋಷಿಸಿ, ಕೊನೆ ಗಳಿಗೆಯಲ್ಲಿ ಅದನ್ನು ವಾಪಸ್ ಪಡೆದಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರವು ಮೊದಲು ಪ್ರಕಟಿಸಿದ್ದ ಅಧಿಕೃತ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ, ಸಮಾಜ ಸೇವೆ ವಿಭಾಗದ ಅಡಿಯಲ್ಲಿ ‘ಆದರ್ಶ ಚಾರಿಟೆಬಲ್ ಟ್ರಸ್ಟ್’ ಅಧ್ಯಕ್ಷರಾದ ಡಾ. ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಸೇರಿಸಲಾಗಿತ್ತು. ದಶಕಗಳಿಂದ ವೈದ್ಯಕೀಯ ರಂಗದಲ್ಲಿ ಬಡವರ ಪಾಲಿನ ಆಶಾಕಿರಣವಾಗಿ, ಅಪಾರ ಸಾಮಾಜಿಕ ಕಳಕಳಿಯ ಸೇವೆ ಸಲ್ಲಿಸುತ್ತಿರುವ ಅವರಿಗೆ ಪ್ರಶಸ್ತಿ ಸಂದಿದ್ದಕ್ಕೆ ಕರಾವಳಿಯಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.
ಆದರೆ, ಈ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ತಿದ್ದುಪಡಿ ಆದೇಶವೊಂದನ್ನು ಹೊರಡಿಸಿತು. ಅದರಲ್ಲಿ ತಾಂತ್ರಿಕ ಕಾರಣ ಹಾಗೂ ಹೆಸರಿನ ಗೊಂದಲದ ನೆಪವೊಡ್ಡಿ, ಡಾ. ಜಿ.ಎಸ್. ಚಂದ್ರಶೇಖರ್ ಅವರ ಹೆಸರನ್ನು ಕೈಬಿಟ್ಟು, ಅವರ ಬದಲಿಗೆ ಜಿ.ಯು. ಭಟ್ ಅವರ ಹೆಸರನ್ನು ಪ್ರಕಟಿಸಲಾಯಿತು.
ಸರ್ಕಾರದ ಎಡವಟ್ಟು ಉಡುಪಿ ಹಾಗೂ ಕರಾವಳಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಊಟಕ್ಕೆ ಕುಳಿತವರ ಕೈಯಿಂದ ತಟ್ಟೆ ಕಸಿದುಕೊಂಡಂತೆ ನಡೆದುಕೊಂಡ ಸರ್ಕಾರದ ಈ ಧೋರಣೆಯು ನೈಜ ಸಾಧಕರಿಗೆ ಮಾಡಿದ ಘೋರ ಅವಮಾನವೆಂದು ಹಲವು ಸಂಘ-ಸಂಸ್ಥೆಗಳು ಕಿಡಿಕಾರಿವೆ. ಸರ್ಕಾರವು ತಕ್ಷಣವೇ ತನ್ನ ತಪ್ಪನ್ನು ಒಪ್ಪಿಕೊಂಡು, ಡಾ. ಚಂದ್ರಶೇಖರ್ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

