ಶಿರ್ವ: ಉಡುಪಿಯ ಕುಂಜಿಬೆಟ್ಟುವಿನಲ್ಲಿ ಪ್ರಧಾನ ಕಚೇರಿ ಹಾಗೂ ಪ್ರಥಮ ಶಾಖೆಯನ್ನು ಹೊಂದಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ದ್ವಿತೀಯ ಶಾಖೆಯು ಅಕ್ಟೋಬರ್ 31ರಂದು ಶಿರ್ವದಲ್ಲಿ ಉದ್ಘಾಟನೆಗೊಳ್ಳಲಿದೆ. ಶಿರ್ವ ಗ್ರಾಮ ಪಂಚಾಯತ್ ಕಚೇರಿಯ ಸಮೀಪದ ಬೆಹರೈನ್ ಟವರ್ನ ನೆಲಮಹಡಿಯಲ್ಲಿ ನೂತನ ಶಾಖೆ ಕಾರ್ಯಾರಂಭ ಮಾಡಲಿದೆ.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ವಂ. ಫಾ. ಚಾರ್ಲ್ಸ್ ಮಿನೇಜಸ್ ಆಶೀರ್ವಚನ ನೀಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋ-ಆಪರೇಟಿವ್, ಬೆಂಗಳೂರಿನ ನಿರ್ದೇಶಕ ಮಂಜುನಾಥ್ ಎಸ್. ಕೆ., ಕೇರಳದ ಪೊಟ್ಟಾದ ಡಿವೈನ್ ರಿಟ್ರೀಟ್ ಸೆಂಟರ್ನ ಧರ್ಮಗುರು ಫಾ. ರಿಚರ್ಡ್ ಕ್ವಾಡ್ರಸ್, ಉಡುಪಿ ಜಿಲ್ಲಾ ಸೌಹಾರ್ದ ಕೋ-ಆಪರೇಟಿವ್ ಯೂನಿಯನ್ ಅಧ್ಯಕ್ಷ ಪಿ. ಜಗನ್ನಾಥ ಶೆಟ್ಟಿ, ಕಥೋಲಿಕ್ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಅರಾನ್ನ, ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ನ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ. ಎಸ್. ಹಾಗೂ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸೊಸೈಟಿಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಾಹಕರ ವಿಶ್ವಾಸ ಗಳಿಸಿರುವ ಸೊಸೈಟಿಯು ಆರಂಭವಾಗಿ ಕೇವಲ ಮೂರು ವರ್ಷಗಳಾಗಿದ್ದರೂ ಉತ್ತಮ ಪ್ರಗತಿ ಸಾಧಿಸುತ್ತಿದೆ. ನಿರ್ದೇಶಕ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಯ ಅವಿರತ ಪರಿಶ್ರಮ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಸಹಕಾರಿ ಕ್ಷೇತ್ರದ ಅನುಭವ ಸಂಸ್ಥೆಯ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಸೊಸೈಟಿಯು ತನ್ನ ಸೇವಾ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ.
ಇದರ ಮುಂದಿನ ಹಂತವಾಗಿ ಸೊಸೈಟಿಯ ಮೂರನೇ ಶಾಖೆಯು ನವೆಂಬರ್ ತಿಂಗಳಲ್ಲಿ ಪೆರಂಪಳ್ಳಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

