ಮಂಗಳೂರು: ಆನ್ಲೈನ್ ಸಾಲ ನೀಡುವ ಆಯಪ್ಗಳ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿ ₹2.90 ಲಕ್ಷ ಹಣ ವಸೂಲಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಆನ್ಲೈನ್ನಲ್ಲಿ ಸಾಲ ನೀಡುವ ‘ಪ್ರಿಫರ್’, ‘ಕ್ರೆಡಿಟ್’ ಹಾಗೂ ‘ಪ್ಲೆಕ್ಸಿ ಬಿ’ ಆಯಪ್ಗಳನ್ನು ಡೌನ್ಲೋಡ್ ಮಾಡಿಕೊಂಡು, ವೈಯಕ್ತಿಕ ಮಾಹಿತಿ ಮತ್ತು ವಿಳಾಸವನ್ನು ನಮೂದಿಸಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಮೇ 22ರಂದು ಅವರ ಖಾತೆಗೆ ₹50 ಸಾವಿರ ಹಾಗೂ ₹1.50 ಲಕ್ಷ ಸಾಲದ ಹಣ ಜಮೆಯಾಗಿತ್ತು. ಬಳಿಕ ಮೂರು ತಿಂಗಳ ಕಾಲ ತಲಾ ₹13,300 ಕಂತುಗಳನ್ನು ಆನ್ಲೈನ್ ಮೂಲಕ ಪಾವತಿಸಿದ್ದರು. ಬಡ್ಡಿ ಸೇರಿದಂತೆ ಒಟ್ಟು ₹2.15 ಲಕ್ಷ ಮರುಪಾವತಿ ಮಾಡುವ ಮೂಲಕ ಅಕ್ಟೋಬರ್ ತಿಂಗಳಲ್ಲಿ ಸಾಲದ ಬಾಕಿಯನ್ನು ಸಂಪೂರ್ಣವಾಗಿ ತೀರಿಸಿದ್ದರು.
ಆದರೆ, ಸಾಲ ಮರುಪಾವತಿ ಮಾಡಿದ ಬಳಿಕವೂ ಅಪರಿಚಿತರು ಮಹಿಳೆಯ ಬ್ಯಾಂಕ್ ಖಾತೆಗೆ ₹5 ಸಾವಿರ, ₹10 ಸಾವಿರ ಹಾಗೂ ₹30 ಸಾವಿರ ಹಣವನ್ನು ವರ್ಗಾಯಿಸಿದ್ದರು. ನಂತರ ಮೊಬೈಲ್ಗೆ ಕರೆ ಮಾಡಿ, ಸಾಲದ ಹಣವನ್ನು ಬಡ್ಡಿ ಸಮೇತ ಮರುಪಾವತಿಸಬೇಕು. ಇಲ್ಲದಿದ್ದರೆ ಮಹಿಳೆಯ ಫೋಟೋವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಲ್ಲದೆ, ಕುಟುಂಬದ ಸದಸ್ಯರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು.
ಇದರಿಂದ ಭಯಗೊಂಡ ಮಹಿಳೆ, ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹2.90 ಲಕ್ಷ ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

