ಉಡುಪಿ: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಉಡುಪಿಯ ನೂತನ ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ವೈದ್ಯಕೀಯ ಸೌಲಭ್ಯಗಳೊಂದಿಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು ನವೆಂಬರ್ 15ರೊಳಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಲೋಕಾರ್ಪಣೆಯ ದಿನಾಂಕವನ್ನು ಘೋಷಿಸಬೇಕು ಎಂದು ಶಾಸಕ ಯಶ್ ಪಾಲ್ ಎ. ಸುವರ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತ್ಯೇಕಗೊಂಡು ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು 28 ವರ್ಷಗಳಾದರೂ ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸುಸಜ್ಜಿತ ಜಿಲ್ಲಾಸ್ಪತ್ರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2021ರಲ್ಲಿ ನೂತನ ಜಿಲ್ಲಾಸ್ಪತ್ರೆಯ ನಿರ್ಮಾಣ ಕಾಮಗಾರಿ ಆರಂಭಗೊಂಡಿದ್ದು, 2023ರಲ್ಲಿಯೇ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಹಲವು ವರ್ಷಗಳು ಕಳೆದರೂ ಆಸ್ಪತ್ರೆ ಸಾರ್ವಜನಿಕರ ಬಳಕೆಗೆ ಲಭ್ಯವಾಗಿಲ್ಲ. ಕಳೆದ ಮೂರೂವರೆ ವರ್ಷಗಳಿಂದ ವೈಯಕ್ತಿಕವಾಗಿ, ಪತ್ರಗಳ ಮೂಲಕ ಹಾಗೂ ವಿಧಾನಮಂಡಲದ ಅಧಿವೇಶನಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇತ್ತೀಚೆಗೆ ಹಳೆಯ ಆಸ್ಪತ್ರೆಯಲ್ಲಿರುವ ಸುಮಾರು 30 ವರ್ಷಗಳಷ್ಟು ಹಳೆಯದಾದ, ತುಕ್ಕು ಹಿಡಿದ ಹಾಗೂ ಶಿಥಿಲಾವಸ್ಥೆಯಲ್ಲಿರುವ ಮಂಚಗಳು, ಕಪಾಟುಗಳು ಮತ್ತು ಇತರ ಉಪಕರಣಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆ ಮುಂದಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. 250 ಹಾಸಿಗೆಗಳ ಆರು ಮಹಡಿಗಳ ಆಸ್ಪತ್ರೆಯನ್ನು ಆಧುನಿಕ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸುವ ಬದಲು ಹಳೆಯ ಉಪಕರಣಗಳನ್ನು ಸ್ಥಳಾಂತರಿಸುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದರು.
ನೂತನ ಆಸ್ಪತ್ರೆಯ ಮೂಲ ಯೋಜನೆಗೆ ಅನುಗುಣವಾಗಿ ಗುಣಮಟ್ಟದ ಹೊಸ ಪೀಠೋಪಕರಣಗಳು, ಆಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್ಐ, ಸಿಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ರೇ, ತೀವ್ರ ನಿಗಾ ಘಟಕ (ಐಸಿಯು), ವೆಂಟಿಲೇಟರ್ ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರೊಂದಿಗೆ ವೈದ್ಯರು, ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಅಗತ್ಯ ಹುದ್ದೆಗಳನ್ನು ಮಂಜೂರು ಮಾಡಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಇತರ ಸುಸಜ್ಜಿತ ಜಿಲ್ಲಾಸ್ಪತ್ರೆಗಳ ಮಾದರಿಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಯನ್ನೂ ಸಮಗ್ರ ವೈದ್ಯಕೀಯ ಸೇವೆಗಳೊಂದಿಗೆ ಅಭಿವೃದ್ಧಿಪಡಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವು ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಜನರಿಗೆ ನಿರೀಕ್ಷಿತ ಆರೋಗ್ಯ ಸೇವೆ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಗಮನಕ್ಕೆ ಈ ವಿಚಾರವನ್ನು ತರಲಾಗಿದೆ. ಜಿಲ್ಲೆಯ ಜನರ ಆರೋಗ್ಯ ಮತ್ತು ಜೀವ ರಕ್ಷಣೆಯ ದೃಷ್ಟಿಯಿಂದ ಸಚಿವರು ನವೆಂಬರ್ 15ರೊಳಗೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಲೋಕಾರ್ಪಣೆಯ ದಿನಾಂಕವನ್ನು ಸ್ಪಷ್ಟವಾಗಿ ಪ್ರಕಟಿಸುವುದರ ಜತೆಗೆ ವೈದ್ಯಕೀಯ ಉಪಕರಣಗಳು, ಪೀಠೋಪಕರಣಗಳು, ಮೂಲಸೌಕರ್ಯ ಹಾಗೂ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಕಾಲಮಿತಿಯ ಕಾರ್ಯಯೋಜನೆಯನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ನಿಗದಿತ ಅವಧಿಯೊಳಗೆ ಸಚಿವರಿಂದ ಯಾವುದೇ ಸ್ಪಷ್ಟ ಭರವಸೆ ದೊರೆಯದಿದ್ದರೆ ಜಿಲ್ಲೆಯ ಜನರೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ದಿನೇಶ್ ಅಮೀನ್, ಪ್ರಭಾಕರ ಪೂಜಾರಿ, ದಿನಕರ ಬಾಬು, ರಾಜು ಕುಲಾಲ್, ಗಿರೀಶ್ ಅಂಚನ್ ಹಾಗೂ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

