ಕುಂದಾಪುರ:- ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಎ ದರ್ಜೆಯ ಸದಸ್ಯತ್ವ ನಿರಾಕರಣೆ ಮಾಡಿರುವುದನ್ನು ವಿರೋಧಿಸಿ ಗಂಗೊಳ್ಳಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀನುಗಾರರ ಒಕ್ಕೂಟ, ಅಂಬೇಡ್ಕರ್ ಯುವ ಸೇನೆ, ದಲಿತ ಸಂಘರ್ಷ ಸಮಿತಿ ವತಿಯಿಂದ ಕುಂದಾಪುರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬೃಹತ್ ಮಟ್ಟದ ಪ್ರತಿಭಟನೆ ನಡೆಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತನಾಡಿ ಮೂಲ ನಿವಾಸಿ ಪರಿಶಿಷ್ಟ ಜಾತಿಯ ಸಾಂಪ್ರದಾಯಿಕ ಮೀನುಗಾರರಿಗೆ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ ಹಾಕಿದಂತಾಗಿದೆ. ಅವರನ್ನು ಸದಸ್ಯತ್ವದಿಂದ ದೂರವಿಟ್ಟಿರುವುದು ಖಂಡನೀಯ. ಅಸ್ಪ್ರಶ್ಯತೆ ನಿವಾರಣೆ ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಯುವಸೇನೆಯ ಗಾಯಕ ಭಗವಾನ್ ದಾಸ್ ಮಲ್ಪೆ ಕ್ರಾಂತಿ ಗೀತೆಯನ್ನು ಹಾಡಿದರು.
ಸಂವಿಧಾನ ಮೂಲಭೂತ ಹಕ್ಕಿನಲ್ಲಿ ಸಮಾನತೆ ಹಕ್ಕು ಜಾರಿಗೆ ಬಂದ ನಂತರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಮೀನುಗಾರರು ಭಾಗವಹಿಸಿದ್ದರು.

