ಬೈಂದೂರು: ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಮಕ್ಕಳಿಗೆ ನೀಡಲಾಗುವ ಬಾಲರತ್ನ ಪ್ರಶಸ್ತಿಗೆ ಬೈಂದೂರಿನ ಬಹುಮುಖ ಬಾಲ ಪ್ರತಿಭೆ ಕೃತ್ತಿಕಾ ಗಾಣಿಗ ಅವರು ಆಯ್ಕೆಯಾಗಿದ್ದಾರೆ.
ಇವರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಕೃಷ್ಣ ಗಾಣಿಗ ಮತ್ತು ಕಾವೇರಿ ಗಾಣಿಗ ಅವರ ಮುದ್ದಿನ ಮಗಳು. ಈಕೆ ಇನ್ನೂರ ಐವತ್ತಕ್ಕೂ ಹೆಚ್ಚು ಯಕ್ಷಗಾನದಲ್ಲಿ ಭಾಗವಹಿಸಿ ಭರತನಾಟ್ಯ ರೂಪಕದಲ್ಲೂ ಸೈ ಎನಿಸಿಕೊಂಡಿದ್ದಾಳೆ.
ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಿರುವ ಕೃತಿಕಾಗೆ ಹೊಸತನ್ನು ಕಲಿಯುವ ಹುಮ್ಮಸ್ಸು. ಜಾನಪದ ನೃತ್ಯ, ಡ್ರಾಮಾ, ನಾಟಕ, ಕುಣಿತ ಭಜನೆಯಲ್ಲಿ ಕೂಡಾ ಈಕೆ ಅದ್ಭುತ ಪ್ರತಿಭಾವಂತೆ. ಕೇವಲ ಕರಾವಳಿಯಲ್ಲಿ ಮಾತ್ರವಲ್ಲದೆ ತನ್ನ ಕಲೆಯನ್ನು ಬೆಂಗಳೂರು, ದಾವಣಗೆರೆ, ಮಂಡ್ಯ, ಮೈಸೂರು, ಜಿಲ್ಲೆಯಲ್ಲಿ ಕೂಡಾ ಪಸರಿಸಿದಾಕೆ.
ಖ್ಯಾತ ರಿಧಂ ನೃತ್ಯ ಶಾಲೆಯಾದ ಲಾವಣ್ಯ ಬೈಂದೂರು ಇಲ್ಲಿ ನೃತ್ಯ ತರಬೇತಿ ಪಡೆದು ವಿವಿಧೆಡೆ ಶೋಗಳನ್ನು ನೀಡಿದ್ದಾರೆ. ಮುಂದೆ ಬಿಡುಗಡೆಯಾಗಲಿರುವ ಕಾಂತಾರ-೧ ಚಿತ್ರದಲ್ಲಿಯೂ ಕೂಡಾ ಕೃತಿಕಾ ಅಭಿನಯಿಸಿರುತ್ತಾಳೆ. ಎಲ್ಲಾ ಕ್ಷೇತ್ರಗಳಲ್ಲೂ ತನ್ನದೇ ಆದ ಪ್ರತಿಭೆಯನ್ನು ಅನಾವರಣಗೊಳಿಸಿರುವ ಈಕೆಯ ಮುಂದಿನ ಭವಿಷ್ಯ ಕೂಡಾ ಉತ್ತಮವಾಗಿರಲಿ ಎಂಬ ಶುಭದೊಸಗೆ…


