ಬೆಂಗಳೂರು, ಏ,23 : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ನಡೆಸಿದ 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯಾದ್ಯಂತ ಸುಮಾರು 9 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದಿದ್ದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮಧ್ಯಾಹ್ನ 12 ಗಂಟೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ರಿಕಾಗೋಷ್ಠಿಯಲ್ಲಿ ಫಲಿತಾಂಶದ ಅಧಿಕೃತ ಘೋಷಣೆ ಹೊರಬೀಳಲಿದೆ. ಈ ವರ್ಷ ಪರೀಕ್ಷೆಗಾಗಿ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು, ಅವರಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ರಾಜ್ಯಾದ್ಯಂತ ಪರೀಕ್ಷೆಗೆ ಹಾಜರಾಗಿದ್ದಾರೆ. ಪತ್ರಿಕಾಗೋಷ್ಠಿ ಮುಗಿದ ಬಳಿಕ ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ವೀಕ್ಷಿಸಬಹುದು.
ಡಿಜಿಲಾಕರ್ ಮೂಲಕ ಅಥವಾ SMS ಮೂಲಕವೂ ಫಲಿತಾಂಶ
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಡಿಜಿಲಾಕರ್ ಮೂಲಕ ಅಥವಾ SMS ಸೇವೆಗಳ ಮೂಲಕವೂ ಪಡೆಯಲು ಸಾಧ್ಯವಾಗುತ್ತದೆ. ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಪ್ರತಿ ವಿಷಯದಲ್ಲೂ ಮಂಡಳಿಯು ನಿಗದಿಪಡಿಸಿದ ಕನಿಷ್ಠ ಉತ್ತೀರ್ಣ ಅಂಕಗಳನ್ನು ಪಡೆಯಬೇಕು.
ಹಿಂದಿ ಭಾಷೆಗೆ ಗ್ರೇಡ್ ಬದಲು ಅಂಕ ನೀಡಲು ಹೈಕೋರ್ಟ್ ಸೂಚನೆ
ಈ ಶೈಕ್ಷಣಿಕ ವರ್ಷದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಮೂರನೇ ಭಾಷೆಗೆ (ಹಿಂದಿ) ಅಂಕಗಳನ್ನು ಪಡೆಯುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಗ್ರೇಡಿಂಗ್ ವ್ಯವಸ್ಥೆ ಸೇರಿದಂತೆ ಪರೀಕ್ಷಾ ನಿಯಮಗಳಲ್ಲಿ ಯಾವುದೇ ಮಾರ್ಪಾಡುಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮಾತ್ರ ಜಾರಿಗೆ ತರಬಹುದು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

