ಪ್ರಸ್ತುತ ದಿನಮಾನಗಳಲ್ಲಿ ಜಂಕ್ಫುಡ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮನೆಯಲ್ಲಿ ತಯಾರಿಸುವ ಆರೋಗ್ಯಕರ ತಿನಿಸುಗಳಿಗಿಂತ ಹೆಚ್ಚಾಗಿ ಜಂಕ್ ಫುಡ್ ಎಲ್ಲರಿಗೂ ಪ್ರಿಯ. ಈ ಫುಡ್ಗಳು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಅದನ್ನು ತಿನ್ನುವವರ ಸಂಖ್ಯೆಗೇನೂ ಕಡಿಮೆ ಇಲ್ಲ ಬಿಡಿ.
ಶಾಲಾ ಮಕ್ಕಳಿಗೂ ಜಂಕ್ಫುಡ್ ಫೇವರೆಟ್. ಮಕ್ಕಳು ಮತ್ತು ಯುವಜನಾಂಗ ಜಂಕ್ ಫುಡ್ ಅಭ್ಯಾಸವನ್ನು ರೂಢಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರ ಮಹತ್ವದ ನಿರ್ಣಯವೊಂದನ್ನು ಪ್ರಕಟಿಸಿದೆ.
ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಸುತ್ತಮುತ್ತ ಸಮೀಪದ 50 ಮೀ. ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲು ನಿರ್ಧರಿಸಲಾಗಿದೆ. ಸರ್ಕಾರ ಈ ಸಂಬಂಧ ಶೀಘ್ರವೇ ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ.
ಶಾಲೆ, ಕಾಲೇಜುಗಳ ಕ್ಯಾಂಟಿನ್ಗಳ ಮೇಲೂ ನಿಗಾ ವಹಿಸಿರುವ ಸರ್ಕಾರ ಅಲ್ಲಿಯೂ ಯಾವುದೇ ರೀತಿಯ ಅನಾರೋಗ್ಯಕರ ಆಹಾರ ಮಾಡದಂತೆ ಕ್ರಮ ಕೈಗೊಳ್ಳಲು ಎಚ್ಚರಿಕೆ ವಹಿಸಿದೆ. ಸರ್ಕಾರದ ನಿಯಮ ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ರವಾನಿಸಲಾಗಿದೆ.
ಸಾರ್ವಜನಿಕರ ಆರೋಗ್ಯದ ಮೇಲೆಯೂ ರಾಜ್ಯ ಸರ್ಕಾರ ಕಾಳಜಿ ವಹಿಸಿದ್ದು, ರಾಜ್ಯದ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಯಾಂಟಿನ್ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ಪೂರೈಕೆ ಕಡ್ಡಾಯ ಎಂದು ಹೇಳಿದೆ.
ಯಾವೆಲ್ಲಾ ಆಹಾರಗಳು ನಿಷೇಧದ ಪಟ್ಟಿಯಲ್ಲಿ ಸೇರಿದೆ ಎನ್ನುವುದು ಸರ್ಕಾರದ ಮಾರ್ಗಸೂಚಿ ಪ್ರಕಟವಾದ ಬಳಿಕವೇ ತಿಳಿಯಬೇಕಿದೆ.

