ಹೇ ದೋಸ್ತಿ, ಹಮ್ ನಹೀ ತೋಡೆಂಗೆ… ಸ್ನೇಹ ಮನುಷ್ಯ ಜೀವನದ ಅತ್ಯಂತ ಸುಂದರ ಅಧ್ಯಾಯಗಳಲ್ಲಿ ಒಂದು. ಬೆಲೆ ಕಟ್ಟಲು ಸಾಧ್ಯವೇ ಇಲ್ಲದ ಸ್ನೇಹವನ್ನು ಸಂಭ್ರಮಿಸುವ ನಿಟ್ಟಿನಲ್ಲೇ ಗೆಳೆಯರ ದಿನ ಅಥವಾ ಫ್ರೆಂಡ್ಶಿಪ್ ಡೇ ಆಚರಣೆ ಮಾಡಲಾಗುತ್ತಿದೆ.
ಯಾವುದೇ ಕಟ್ಟುಪಾಡುಗಳಿಲ್ಲದೆ, ಜಾತಿ ಮತ ಧರ್ಮಗಳ ಎಲ್ಲೆಯನ್ನು ದಾಟಿ ಹುಟ್ಟಿಕೊಳ್ಳುವ ಸುಂದರ ಸಂಬಂಧವೇ ಸ್ನೇಹ. ಇಲ್ಲಿ ಪ್ರೀತಿ ಇದೆ, ಕಾಳಜಿ ಇದೆ. ಮಮತೆ, ಭರವಸೆ, ಸಹಾಯ ಸಹಕಾರದ ಮನೋಭಾವ ಎಲ್ಲವೂ ಇದೆ. ಭಾಷೆಯ ಹಂಗುಗುಂಗುಗಳಿರದೆ ವಿಶ್ವದಾದ್ಯಂತ ಹಬ್ಬಿರುವ ಸ್ನೇಹವನ್ನು ವ್ಯಾಖ್ಯಾನಿಸುವುದೇ ಕಷ್ಟ. ಅಂದ ಹಾಗೆ ಸ್ನೇಹಕ್ಕೆ ದೇಶ -ವಿದೇಶ ಎನ್ನುವ ಗಡಿಯ ಬಂಧನವೂ ಇಲ್ಲ.
ಒಳ್ಳೆಯ ಗೆಳೆಯನೊಬ್ಬ ಬದುಕಿನಲ್ಲಿದ್ದರೆ ಅದೇನೇ ಕಷ್ಟದ ಸ್ಥಿತಿ ಇರಲಿ ನಮಗೆ ಆನೆ ಬಲ ಬರುತ್ತದೆ. ಒಬ್ಬ ಒಳ್ಳೆಯ ಸ್ನೇಹಿತ ನಮಗೆ ಮಾರ್ಗದರ್ಶಕನೂ ಆಗುತ್ತಾನೆ. ಕಷ್ಟದ ಸಮಯದಲ್ಲಿ ಹೆಗಲಾಗುತ್ತಾನೆ. ಹಾಗೆಯೇ ಹೆತ್ತವರು, ಒಡಹುಟ್ಟಿದವರು, ಸಂಬಂಧಿಕರು ಅಥವಾ ಇನ್ಯಾರ ಜೊತೆಗೂ ಹಂಚಿಕೊಳ್ಳಲಾಗದ ಸಂಗತಿಗಳನ್ನು ಕೇಳುವ ಕಿವಿಯೂ ನಮ್ಮ ಸ್ನೇಹಿತನಾಗುತ್ತಾನೆ ಎನ್ನುವುದು ಸತ್ಯ ಸಂಗತಿ.
ಭಿನ್ನ ಭಿನ್ನ ಆಚಾರ – ಸಂಸ್ಕೃತಿ, ಅಭಿರುಚಿಗಳಿದ್ದರೂ ಅದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಹುಟ್ಟುವ ಸ್ನೇಹ ವಿಶ್ವದ ಅತ್ಯಂತ ಉತ್ತಮ ಸಂಗತಿಗಳಲ್ಲಿ ಒಂದು. ಬಾಲ್ಯದಿಂದ ಹಿಡಿದು ಶಿಕ್ಷಣ ಸಂಪೂರ್ಣವಾಗುವ ವರೆಗೆ, ಕೆಲಸ ಮಾಡುವ ಸ್ಥಳಗಳಲ್ಲಿ, ಮನೆಯ ಅಕ್ಕಪಕ್ಕ, ಸಾರ್ವಜನಿಕ ಪ್ರದೇಶಗಳಲ್ಲಿ ಸ್ನೇಹ ಹುಟ್ಟುತ್ತದೆ. ಅಂದ ಹಾಗೆ ಸ್ನೇಹ ಹುಟ್ಟಲು ನಿರ್ಧಿಷ್ಟ ಪ್ರದೇಶ ಎನ್ನುವುದೂ ಇಲ್ಲ. ಪ್ರಸ್ತುತ ದಿನಗಳಲ್ಲಿ ಫೋನ್, ಸಾಮಾಜಿಕ ಜಾಲತಾಣಗಳಲ್ಲಿಯೂ ಗೆಳೆತನದ ನಂಟು ಬೆಳೆಯುತ್ತಿದೆ ಎನ್ನುವುದು ಆಧುನಿಕ ಜಗತ್ತಿನ ಮತ್ತೊಂದು ವಿಶೇಷತೆ.
ಒಳ್ಳೆಯ ಜನರ ಸ್ನೇಹ ಮಾಡಿದಲ್ಲಿ ಬದುಕಿಗೆ ಒಳಿತಾಗುತ್ತದೆ ಹೇಗೆಯೋ, ಕೆಟ್ಟ ಮನಸ್ಥಿತಿಯವರ ಜೊತೆಗಿನ ಗೆಳೆತನ ನಮ್ಮ ಸುಂದರ ಬದುಕಿನ ಮೇಲೆಯೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಸ್ನೇಹಿತರನ್ನು ಸಹ ತುಂಬಾ ಸೂಕ್ಷ್ಮವಾಗಿ ನೋಡಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇಂದಿನ ದುಃಸ್ಥಿತಿ.
ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಸಮುದಾಯಗಳ ಬೇಲಿ ಇಲ್ಲದೆ ಸ್ನೇಹ ಎನ್ನುವುದು ಸ್ವಚ್ಛಂದವಾಗಿ ಹಾರಾಡುವ ಹಕ್ಕಿ. ಆ ಹಕ್ಕಿಯನ್ನು ಮೃದುವಾಗಿ ಹಿಡಿದು ಬದುಕಿನುದ್ದಕ್ಕೂ ಜೊತೆಗೆ ಕರೆದುಕೊಂಡು ಹೋಗುವುದು, ಕಷ್ಟ ಸುಖಗಳಲ್ಲಿ ಭಾಗಿಯಾಗುವುದು ಮಾಡಿದಲ್ಲಿ ಸ್ನೇಹ ಚಿರನೂತನ..
ಜಗತ್ತಿನ ಎಲ್ಲಾ ಸ್ನೇಹಿತರಿಗೂ ಫ್ರೆಂಡ್ಶಿಪ್ ಡೇ ಶುಭಾಶಯಗಳು.. ಚಿರಕಾಲ ಇರಲಿ ಈ ಸ್ನೇಹ.

