ಇಂದಿನ ಯುವಕರಾದಿಯಾಗಿ ಎಲ್ಲಾ ವಯೋಮಾನದವರ ದೊಡ್ಡ ಸಮಸ್ಯೆ ಮಾನಸಿಕ ಒತ್ತಡ. ಇನ್ನೂ ಜಗತ್ತನ್ನು ಸರಿಯಾಗಿ ತಿಳಿಯದ ಮಕ್ಕಳಿಂದ ಹಿಡಿದು ಎಲ್ಲವನ್ನೂ ಅನುಭವಿಸಿ ಮಾಗಿದ ವೃದ್ಧರವರೆಗೆ ಮಾನಸಿಕ ಒತ್ತಡಕ್ಕೆ ತುತ್ತಾಗಿ ಆತ್ಮಹತ್ಯೆಯಂತಹ ಕೆಟ್ಟ ಆಲೋಚನೆಗಳ ದಾರಿ ಹಿಡಿಯುತ್ತಿದ್ದಾರೆ ಎನ್ನುವುದು ದುರಂತ. ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದ, ಪ್ರಯತ್ನ ನಡೆಸಿದ ಬಗ್ಗೆ ಸುದ್ದಿಗಳನ್ನು ದಿನನಿತ್ಯ ಮಾಧ್ಯಮಗಳಲ್ಲಿ ನೋಡುತ್ತೇವೆ, ಓದುತ್ತೇವೆ.
ಮಾನಸಿಕ ಒತ್ತಡದಿಂದ ಹೇಗೆ ಮುಕ್ತರಾಗಿ ಇರುವ ಒಂದು ಜೀವನವನ್ನು ಜಯಿಸಬಹುದು ಎನ್ನುವುದಕ್ಕೆ ಇಲ್ಲಿದೆ ಕೆಲವು ಸಲಹೆಗಳು.
ಮಾನಸಿಕ ಒತ್ತಡ ಯಾರಿಗಿಲ್ಲ ಹೇಳಿ. ಬಡವನಿಗೆ ಗಳಿಕೆಯ ಬಗ್ಗೆ ಚಿಂತೆಯಾದರೆ, ಧನಿಕನಿಗೆ ಇರುವುದನ್ನು ಹೆಚ್ಚು ಮಾಡುವುದು ಹೇಗೆ? ಉಳಿಸಿಕೊಳ್ಳುವುದು ಹೇಗೆ? ಎನ್ನುವ ಚಿಂತೆ. ಕೆಲವರಿಗೆ ಕೌಟುಂಬಿಕ ಸಮಸ್ಯೆ, ಕೆಲವು ಜನರಿಗೆ ಆರೋಗ್ಯದ ಸಮಸ್ಯೆ, ಇನ್ನೂ ಕೆಲವರಿಗೆ ಪ್ರೀತಿ ಪ್ರೇಮದ ಸಮಸ್ಯೆ, ಮಕ್ಕಳಿಗೆ ಓದಿನ ಸಮಸ್ಯೆ. ಹೀಗೆ ಜಗತ್ತಿನಲ್ಲಿ ಸರ್ವಸುಖಿಗಳು ಎನ್ನುವವರು ಯಾರೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳು ಇದ್ದೇ ಇದೆ. ಹಾಗೆಂದು ಮಾತ್ರಕ್ಕೆ ಸಮಸ್ಯೆಗಳಿಗೆ ಹೆದರಿ ಜೀವವನ್ನೇ ಕಳೆದುಕೊಂಡರೆ ಹೇಗೆ.
ನಾವೆಲ್ಲಾ ಮೊಬೈಲ್ ದಾಸರು. ಈ ಮೊಬೈಲನ್ನು ಅಗತ್ಯಕ್ಕೆ ತಕ್ಕ ಹಾಗೆ ಬಳಕೆ ಮಾಡಿದರೆ ಅಪಾಯವಿಲ್ಲ. ಆದರೆ ಮೊಬೈಲ್ ಎನ್ನುವ ವಸ್ತು ನಮ್ಮ ಮನಸ್ಸನ್ನು ಆಳಲು ಹೊರಟಾಗ ಸಮಸ್ಯೆಯಾಗುತ್ತದೆ. ಇದು ಆತಂಕ, ಒತ್ತಡಕ್ಕೂ ಕಾರಣವಾಗುತ್ತದೆ.
ಮಾನವನಿಗೆ ಕನಿಷ್ಟ 8 ಗಂಟೆಗಳ ನಿದ್ರೆಯಾದರೂ ಬೇಕೇ ಬೇಕು. ಇದು ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಕಡಿಮೆ ನಿದ್ರೆಯ ಕಾರಣದಿಂದ ನಮ್ಮ ಏಕಾಗ್ರತೆಗೆ ಭಂಗವಾಗುತ್ತದೆ. ಹೆಚ್ಚು ಕೋಪ ಬರುವುದು, ಕಿರಿಕಿರಿ, ಒತ್ತಡ ಸೃಷ್ಟಿಯಾಗುತ್ತದೆ.
ನಮಗೆ ಯಾವುದೇ ಸಮಸ್ಯೆ ಬಂದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಂಡು ಕೊರಗಿದರೆ ಒತ್ತಡ ಹುಟ್ಟುತ್ತದೆ. Sharing is Caring ಎಂಬಂತೆ ಸಮಸ್ಯೆಗಳನ್ನು ನಮ್ಮ ಆತ್ಮೀಯರಲ್ಲಿ ಹೇಳಿಕೊಳ್ಳುವ, ನಂಬಿಕಸ್ಥರ ಜೊತೆಗೆ ಹಂಚಿಕೊಳ್ಳುವುದರಿಂದ ಒತ್ತಡ ನಿವಾರಣೆ ಸಾಧ್ಯ.
ವಿಶೇಷವಾಗಿ ಮಕ್ಕಳಿಗೆ, ಪರೀಕ್ಷೆಗಳ ಸಂದರ್ಭದಲ್ಲಿ ಅಂಕ ಪಡೆಯುವುದಕ್ಕೆ ಸಂಬಂಧಿಸಿದ ಹಾಗೆ ಒತ್ತಡ ಇರುತ್ತದೆ. ಮನೆಯಲ್ಲಿ ಪೋಷಕರು ಸಹ ಅವರ ಒತ್ತಡ ಹೆಚ್ಚುವ ಹಾಗೆ ವರ್ತಿಸುತ್ತಾರೆ. ಹಾಗಾಗಿ ಮಕ್ಕಳ ಜೊತೆಗೆ ಆದಷ್ಟು ಸಾವಧಾನದಿಂದ ವರ್ತಿಸಿ, ಅವರ ಒತ್ತಡ ಏನೆಂದು ತಿಳಿದು ಅದಕ್ಕೆ ಪರಿಹಾರ ನೀಡಿದಲ್ಲಿ ಉತ್ತಮ.

