ಬೆಂಗಳೂರು: ರಾಜ್ಯದ ಕಂದಾಯ ಇಲಾಖೆ ಮತದಾರರಿಗೆ SIR ಪ್ರಕ್ರಿಯೆಯಲ್ಲಿ ಸುಲಭವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ 4.8 ಕೋಟಿಗೂ ಹೆಚ್ಚು ಜಾತಿ ಪ್ರಮಾಣಪತ್ರಗಳನ್ನು ಉಚಿತವಾಗಿ ವಿತರಿಸಲು ಯೋಜನೆ ರೂಪಿಸಿದೆ.
ಕಂದಾಯ ಆಯುಕ್ತೆ ಮೀನಾ ನಾಗರಾಜ್ ಅವರು ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದಾರೆ. SIR ಅಭಿಯಾನ ವೇಗವಾಗಿ ಸಾಗಲು ನಾಗರಿಕರಿಗೆ ಅನುಕೂಲವಾಗುವಂತೆ ‘ಅಟಲ್ ಜಿ ಜನಸ್ನೇಹಿ ನಿರ್ದೇಶನಾಲಯದಲ್ಲಿ’ ಲಭ್ಯವಿರುವ ಜಾತಿ ಪ್ರಮಾಣಪತ್ರಗಳ ಪಿಡಿಎಫ್ಗಳನ್ನು ಜಿಲ್ಲೆ, ತಾಲೂಕು, ಗ್ರಾಮವಾರು ವಿಂಗಡಿಸಿ ನೀಡಲು ಸೂಚಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಮೂಲಕ ಇವುಗಳನ್ನು ಮುದ್ರಿಸಿ ಜನರಿಗೆ ತಲುಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಅರ್ಹರಿಗೆ ಈ ದಾಖಲೆಯನ್ನು SMS, ವಾಟ್ಸ್ಯಾಪ್ ಮೂಲಕವೂ ಡೌನ್ಲೋಡ್ ಮಾಡಲು ಅನುಕೂಲವಾಗುವಂತೆ ರೂಪಿಸಲಾಗಿದ್ದು, ಅದಕ್ಕಾಗಿ ಸಂಬಂಧಿತ ಲಿಂಕ್ ಬರಲಿದೆ. ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಮೊಬೈಲ್ ಆ್ಯಪ್ ಸಹ ರೂಪುಗೊಂಡಿದೆ. ಅಧಿಕಾರಿಗಳು ಮನೆಗೆ ಬಂದು ಆಧಾರ್, ಮೊಬೈಲ್ ಒಟಿಪಿ ಮೂಲಕ ಈ ಪ್ರಮಾಣ ಪತ್ರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ.
ಚುನಾವಣಾ ಆಯೋಗ ಅಂಗೀಕಾರ ಮಾಡಿರುವ SIR ಗೆ ಬೇಕಾದ ದಾಖಲೆಗಳಲ್ಲಿ ಜಾತಿ ಪ್ರಮಾಣಪತ್ರವೂ ಇದೆ. ಈ ಪ್ರಮಾಣಪತ್ರ ಮತ್ತು ಇದರ ಜೊತೆಗೆ ಸಿ.ಎಂ. ಅವರ ಜಾಗೃತಿ ಸಂದೇಶ ಮತ್ತು ಹಿಂಭಾಗದಲ್ಲಿ SIR ಗೆ ಅಗತ್ಯವಿರುವ ಇತರ ದಾಖಲೆಗಳನ್ನು ಕಲರ್ ಪ್ರಿಂಟ್ ಮೂಲಕ ನೀಡಲಾಗುತ್ತದೆ.

