ನವದೆಹಲಿ: ವಾಣಿಜ್ಯ ಬಳಕೆಯ ಅಡುಗೆ ಅನಿಲ (LPG) ಬಳಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ಸಿಹಿ ಸುದ್ದಿ ನೀಡಿದ್ದು, 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹200ಕ್ಕೂ ಹೆಚ್ಚು ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ದೆಹಲಿಯಲ್ಲಿ ಸಿಲಿಂಡರ್ ಬೆಲೆ ₹202 ಹಾಗೂ ಕೋಲ್ಕತ್ತಾದಲ್ಲಿ ₹209 ಇಳಿಕೆಯಾಗಿದೆ. ಈ ಬೆಲೆ ಪರಿಷ್ಕರಣೆಯ ಬಳಿಕ ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ₹2,872.50ಕ್ಕೆ ತಲುಪಿದೆ ಎಂದು ‘ಎಎನ್ಐ’ ವರದಿ ಮಾಡಿದೆ.
ವಿಶೇಷವೆಂದರೆ, ಇದು ಸತತ ಎರಡನೇ ತಿಂಗಳು ವಾಣಿಜ್ಯ ಎಲ್ಪಿಜಿ ದರದಲ್ಲಿ ಕಂಡುಬಂದ ಇಳಿಕೆಯಾಗಿದೆ. ಜುಲೈ 1ರಂದು ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು ₹183.50ರಷ್ಟು ಕಡಿಮೆ ಮಾಡಲಾಗಿತ್ತು (ದರ ₹2,930 ಆಗಿತ್ತು). ಅಲ್ಲದೆ, 5 ಕೆಜಿ ಫ್ರೀ ಟ್ರೇಡ್ ಎಲ್ಪಿಜಿ (FTL) ಸಿಲಿಂಡರ್ ಬೆಲೆಯನ್ನೂ ₹13ರಷ್ಟು ಕಡಿತಗೊಳಿಸಲಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ಇದರ ಬೆಲೆ ₹808.50ಕ್ಕೆ ಇಳಿಕೆಯಾಗಿದೆ. ನಿರಂತರ ಬೆಲೆ ಕಡಿತದಿಂದಾಗಿ ಹೊಟೇಲ್ ಹಾಗೂ ವಾಣಿಜ್ಯ ಉದ್ಯಮಿಗಳಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.

