ಮಾನವರಾದಿಯಾಗಿ ಎಲ್ಲಾ ರೀತಿಯ ಜೀವ ಸಂಕುಲಗಳು ಉಸಿರಾಡುತ್ತಿವೆ, ಬದುಕುತ್ತಿವೆ ಎಂದಾದಲ್ಲಿ ಅದರಲ್ಲಿ ನಿಸರ್ಗದ ಪಾತ್ರವನ್ನು ನಾವು ಮರೆಯಿವಂತಿಲ್ಲ. ಪ್ರಕೃತಿಯ ಹೊರತಾಗಿ ಜೀವರಾಶಿಗಳ ಪ್ರಾಣ, ಜೀವನ ಇಲ್ಲವೇ ಇಲ್ಲ ಎಂದರೆ ತಪ್ಪಾಗಲಾರದು. ಇಂದು ‘ವಿಶ್ವ ಪರಿಸರ ಸಂರಕ್ಷಣಾ ದಿನ’. ಈ ದಿನದಂದು ನಾವು ಬದುಕಲು ಬೇಕಾದ ಎಲ್ಲವನ್ನೂ ಕೊಟ್ಟ ಪ್ರಕೃತಿಗೆ ನಾವೇನು ಕೊಡಬಹುದು ಎನ್ನುವುದನ್ನು ನೋಡೋಣ.
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ನಿಸರ್ಗ ಉಳಿದರೆ ಮಾತ್ರ ನಮ್ಮೆಲ್ಲರ ಉಸಿರು ಉಳಿಯುವುದು ಸಾಧ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ವಿಷಯದಲ್ಲಿ ನಾವು ಸೋಲುತ್ತಿದ್ದೇವೆ ಎನ್ನುವುದು ದೊಡ್ಡ ದುರಂತ. ನಮ್ಮ ಈ ಮನಸ್ಥಿತಿ ಮುಂದಿನ ದಿನಗಳಲ್ಲಿ ನಮ್ಮ ಬದುಕಿಗೆಯೇ ಅಪಾಯ ತಂದೊಡ್ಡಬಹುದು ಎನ್ನುವುದು ಸತ್ಯ.
ಪರಿಸರಕ್ಕೆ ನಾವು ಕೊಟ್ಟಿದ್ದೇನು?
ಮರ ಕಡಿಯುವಲ್ಲಿ, ನೀರಿಗೆ ಕಲ್ಮಷಗಳನ್ನು ಸೇರಿಸುವಲ್ಲಿ, ಗಾಳಿಯ ಗುಣಮಟ್ಟ ಹದೆಗೆಡುವಂತೆ ಮಾಡುವುದರಲ್ಲಿ ಒಟ್ಟಾರೆ ಹೇಳುವುದಾದರೆ ಇಡೀ ಪ್ರಕೃತಿಗೆ ತೊಂದರೆ ಮಾಡುವುದರಲ್ಲಿ ಮನುಷ್ಯ ಎತ್ತಿದ ಕೈ.
ಹಿಂದೆ ಕಾಡು ಪ್ರದೇಶಗಳಾಗಿದ್ದಲ್ಲೆಲ್ಲಾ ಈಗ ಕಾಂಕ್ರೀಟ್ ಕಟ್ಟಡಗಳ ಕಾಡನ್ನು ಕಾಣುತ್ತೇವೆ. ನೀರಿನ ಆಗರಗಳಿಗೆ ಕಸ ಕಲ್ಮಷ ಸುರಿದು ಅವುಗಳನ್ನು ಉಪಯೋಗಕ್ಕೆ ಬಾರದ ಸ್ಥಿತಿಗೆ ತಳ್ಳುತ್ತೇವೆ. ಕಾಡಿನ ನಾಶದಿಂದ ಮಳೆ, ಬೆಳೆಯ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ನಾವು ಪ್ರತಿವರ್ಷವೂ ಅನುಭವಿಸಿಕೊಂಡೇ ಬರುತ್ತಿದ್ದೇವೆ. ಆದರೂ ಪ್ರಕೃತಿಯ ಮೇಲಿನ ನಮ್ಮ ವರ್ತನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ ಎನ್ನುವುದು ಮುಂದಿನ ಜನಾಂಗದ ಭವಿಷ್ಯದ ಕರಾಳತೆಗೆ ಕಾರಣವಾಗಲಿದೆ ಎನ್ನುವುದು ನೋವಿನ ಸಂಗತಿ.
ಇಂದು ಪ್ರತಿಯೊಬ್ಬರ ಮನೆಯಲ್ಲೂ ಸ್ ಕೂಟ ರ್, ಬೈಕ್, ನಾಲ್ಕು ಚಕ್ರದ ವಾಹನಗಳು ಸರ್ವೇ ಸಾಮಾನ್ಯ. ಜೊತೆಗೆ ಎಲೆಕ್ಟ್ರಿಕ್ ವಸ್ತುಗಳ ಬಳಕೆಯೂ ಕಾಮನ್. ಇವುಗಳಿಂದ ಹೊರಡುವ ವಿಷಕಾರಿ ಅನಿಲಗಳು ಮಾಯುಮಾಲಿನ್ಯಕ್ಕೆ ನಾವು ನೀಡುವ ಕೊಡುಗೆ.
ಪ್ಲಾಸ್ಟಿಕ್ ಬಳಕೆ ಮಾಡುವ ನಾವು ಅದನ್ನು ಸುಡುವುದು, ಎಲ್ಲೆಂದರಲ್ಲಿ ಎಸೆಯುವ ಮೂಲಕ ಪ್ರಕೃತಿಗೆ ಹಾನಿ ಮಾಡುತ್ತಿದ್ದೇವೆ.
ನಿಸರ್ಗಕ್ಕೆ ನಾವು ಕೊಡಬೇಕಾದದ್ದೇನು?
ನಮಗೆ ಬದುಕಲು ಬೇಕಾದ ಎಲ್ಲವನ್ನೂ ನೀಡುವ ಪ್ರಕೃತಿಗೆ ನಾವು ನೀಡಬೇಕಾದದ್ದು ‘ಪ್ರಕೃತಿ ಉಳಿಸುತ್ತೇವೆ ಎನ್ನುವ ವಾಗ್ದಾನ.
ಮರ ಕಡಿಯಲು ಆಸಕ್ತಿ ತೋರುವ ನಾವು ಗಿಡ ನೆಟ್ಟು ಬೆಳೆಸುವತ್ತಲೂ ಮನಸ್ಸು ಮಾಡಬೇಕು. ಜಲಮೂಲಗಳನ್ನು ಮಲಿನ ಮಾಡದೆ ಮಾನಿನ್ಯ ತಡೆಯುವಲ್ಲಿ ಕೆಲಸ ಮಾಡಬೇಕು. ಇತರರಿಗೂ ಜಾಗೃತಿ ಮೂಡಿಸಬೇಕು. ಉಸಿರಾಡುವ ಗಾಳಿ ಸುರಕ್ಷಿತವಾಗಿರುವಂತೆ ಪ್ರಯತ್ನ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಅವುಗಳನ್ನು ಎಲ್ಲೆಂದರಲ್ಲಿ ಎಸೆಯದೆ ನಿಸರ್ಗಕ್ಕೆ ಹಾನಿಯಾಗುವಿದನ್ನು ತಪ್ರಿಸುವಲ್ಲಿ ಕೆಲಸ ಮಾಡಬೇಕು.
ನಿಸರ್ಗದತ್ತವಾಗಿ ಸಿಗುವ ಸಂಪನ್ಮೂಲಗಳನ್ನು ಅನಗತ್ಯವಾಗಿ ವ್ಯಯಿಸುವುದನ್ನು ತಪ್ಪಿಸಬೇಕು. ತ್ಯಾಜ್ಯ ವಸ್ತುಗಳನ್ನು ಜಲಮೂಲಗಳಿಗೆ ಬಿಡುವುದನ್ನು ನಿಲ್ಲಿಸಬೇಕು.
ಬಹಳ ಮುಖ್ಯವಾಗಿ ಪ್ರಕೃತಿಯನ್ನು ಉಳಿಸುವಂತೆ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಪ್ರಕೃತಿ ಉಳಿದರೆ ನಾವು ಉಳಿದೇವು. ನಿಸರ್ಗದ ಅಳಿವು ನಮ್ಮ ಅಳಿವು.

