ವಂದೇ ಮಾತರಂ ಗೀತೆ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅದೆಷ್ಟೋ ಹೋರಾಟಗಾರರ ಎದೆಯಲ್ಲಿ ಕಿಚ್ಚು ಹೊತ್ತಿಸಿದ ಗೀತೆ. ಅಂತಹ ದೇಶ ಭಕ್ತಿಯ ಗೀತೆಯನ್ನು ಕೇಳಿದರೆ ಭಾರತದಲ್ಲಿರುವ ಕೆಲವರಿಗೆ ಮೈಯೆಲ್ಲಾ ಉರಿ. ವಂದೇ ಮಾತರಂ ಗೀತೆಗೆ ಅವಮಾನ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಧ್ವನಿ ಮತದ ಮೂಲಕ ರಾಜ್ಯಸಭೆಯಲ್ಲಿ ಮಹತ್ವದ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದೆ.
ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ 2026 ಅಂಗೀಕಾರವಾಗಿದ್ದು, ಆ ಮೂಲಕ ವಂದೇ ಮಾತರಂ ಗೀತೆಗೆ ಕಾನೂನಾತ್ಮಕ ರಕ್ಷಣೆ ದೊರೆತಿದೆ.
ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ಹೋಗುವ ಕೊನೆಯ ಕ್ಷಣದಲ್ಲಿ ವಂದೇ ಮಾತರಂ ಹೇಳುತ್ತಿದ್ದರು. ಅಂತಹ ವಂದೇ ಮಾತರಂ ಬಗ್ಗೆ ನಮ್ಮ ದೇಶದಲ್ಲೇ ಕೆಲವರಿಗೆ ಅಸಮಾಧಾನ ಇದೆ ಎನ್ನುವುದು ದುರಂತ. ಅಂತಹ ದುಷ್ಟ ಮನಸ್ಥಿತಿಗಳಿಗೆ ಬುದ್ಧಿ ಕಲಿಸುವ ಸಲುವಾಗಿ ಮತ್ತು ವಂದೇ ಮಾತರಂ ಗೀತೆಯ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಈ ಕ್ರಮ ಗಮನಾರ್ಹ.
ಈ ಹೊಸ ವಿಧೇಯಕದ ಪ್ರಕಾರ ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರೀಯ ಗೀತೆ ವಂದೇ ಮಾತರಂ ಮೊದಲಾದ ದೇಶಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಅದನ್ನು ಮಾಡುವುದಕ್ಕೆ ಅಡ್ಡಿಪಡಿಸಿದರೆ ಅದು ಶಿಕ್ಷಾರ್ಹ ಅಪರಾಧ.
ಇಂತಹ ತಪ್ಪುಗಳನ್ನು ಎಸಗಿದವರಿಗೆ ಗರಿಷ್ಠ 3 ವರ್ಷಗಳ ವರೆಗೆ ಜೈಲು, ದಂಡ ವಿಧಿಸಲು ಅವಕಾಶ ನೀಡಲಾಗಿದೆ.
ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷಗಳಾಗಿವೆ. ಇಂತಹ ಸಮಯದಲ್ಲಿ ಸರ್ಕಾರ ತೆಗೆದುಕೊಂಡಿರುವ ಈ ಕ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

