ಕುಂದಾಪುರ: ನಿನ್ನೆ ಬೆಳ್ಳಂಬೆಳಗ್ಗೆ ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಶೂಟ್ ಔಟ್ ಪ್ರಕರಣದ ಪ್ರಮುಖ ಆರೋಪಿ ಡೆರಿಕ್ ಕ್ರಾಸ್ತಾ ಎಂಬುವನನ್ನು ಪೊಲೀಸರು ಅರೆಸ್ಟ್ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರೋಪಿಯ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರ ನೇತೃತ್ವದಲ್ಲಿ ಡೆರಿಕ್ ಕ್ರಾಸ್ತಾ ಪತ್ತೆಗೆ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು, ಇದೀಗ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ.

ಜುಲೈ 30ರ ರಾತ್ರಿ 11:45ರಿಂದ 1:00 ಗಂಟೆಯ ಅವಧಿಯಲ್ಲಿ ಆರೋಪಿ ಡೆರಿಕ್ ಹಾಗೂ ಐವನ್ ನಡುವೆ ಹಣಕಾಸು ಮತ್ತು ಮಧ್ಯಸ್ಥಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೊಬೈಲ್ನಲ್ಲಿ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ಡೆರಿಕ್, “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಸವಾಲು ಹಾಕಿ, ರಾತ್ರಿ ಸುಮಾರು 1:30ಕ್ಕೆ ತಾನು ಇರುವ ಲೊಕೇಶನ್ ಅನ್ನು ಐವನ್ಗೆ ಕಳುಹಿಸಿದ್ದ.
ಈ ಸವಾಲನ್ನು ಸ್ವೀಕರಿಸಿದ ಐವನ್, ತಮ್ಮ ಮಹಿಳಾ ಸ್ನೇಹಿತೆಯೊಂದಿಗೆ ಕಾರಿನಲ್ಲಿ ಆ ಲೊಕೇಶನ್ ಆಧರಿಸಿ ಕುಂದಾಪುರದ ಚರ್ಚ್ ರಸ್ತೆಗೆ ಬಂದು ಕಾರು ನಿಲ್ಲಿಸಿದ್ದರು. ಬಳಿಕ ಮುಂಜಾನೆ 3:15ರ ಸುಮಾರಿಗೆ ಕೆಂಪು-ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಡೆರಿಕ್, ಐವನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಪಿಸ್ತೂಲ್ನಿಂದ ಸೊಂಟ ಮತ್ತು ಕಾಲಿನ ಭಾಗಕ್ಕೆ ಗುಂಡು ಹಾರಿಸಿದ್ದನು. ಇದರಿಂದಾಗಿ ಉಂಟಾದ ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

