ಕುಂದಾಪುರದ ಚರ್ಚ್ ರಸ್ತೆಯಲ್ಲಿ ಉದ್ಯಮಿ ಐವನ್ ರಿಚರ್ಡ್ ಮಸ್ಕರೇನಸ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.
ಜುಲೈ 30ರ ರಾತ್ರಿ ಡೆರಿಕ್ ಕ್ರಾಸ್ತಾ ಮತ್ತು ಐವನ್ ನಡುವೆ ಹಣಕಾಸಿನ ವ್ಯವಹಾರದ ವಿಚಾರವಾಗಿ ದೂರವಾಣಿ ಮೂಲಕ ತೀವ್ರ ವಾಗ್ವಾದ ನಡೆದಿದೆ. ಬಳಿಕ “ದಮ್ ಇದ್ದರೆ ಒಬ್ಬನೇ ಕುಂದಾಪುರಕ್ಕೆ ಬಾ” ಎಂದು ಡೆರಿಕ್ ಸವಾಲು ಹಾಕಿದ್ದಾನೆ ಎನ್ನಲಾಗಿದೆ.
ಜುಲೈ 31ರ ಮುಂಜಾನೆ ಡೆರಿಕ್ ಲೊಕೇಶನ್ ಕಳುಹಿಸಿದ್ದು, ಅದರಂತೆ ಚರ್ಚ್ ರಸ್ತೆಯ ಹೋಲಿ ರೋಸಾರಿ ಚರ್ಚ್ ಎದುರು ಐವನ್ ಕಾರಿನಲ್ಲಿ ಕಾಯುತ್ತಿದ್ದರು. ಬೆಳಗಿನ ಸುಮಾರು 3:15ರ ವೇಳೆಗೆ ಕಪ್ಪು-ಕೆಂಪು ಬಣ್ಣದ ಥಾರ್ ವಾಹನದಲ್ಲಿ ಬಂದ ಡೆರಿಕ್, ಕಾರಿನಿಂದ ಇಳಿದು ಐವನ್ ಅವರ ಮೇಲೆ ಗನ್ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೊಂಟ ಮತ್ತು ಕಾಲಿನ ಭಾಗಕ್ಕೆ ಗುಂಡೇಟು ತಗುಲಿ ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಣಕಾಸು ಹಾಗೂ ಇತರ ವ್ಯವಹಾರಗಳಲ್ಲಿನ ಮನಸ್ತಾಪವೇ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 103 ಹಾಗೂ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 3 ಮತ್ತು 25ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಡೆರಿಕ್ ಕ್ರಾಸ್ತಾ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

