ಮಂಗಳೂರು: ಅಂಬ್ಯುಲೆನ್ಸ್ ಮೂಲಕ ಡ್ರಗ್ಸ್ ಸಾಗಾಟದ ಆರೋಪ ಎದುರಿಸುತ್ತಿರುವ ಅಂಬ್ಯುಲೆನ್ಸ್ ಚಾಲಕ ಜಲೀಲ್ ಎಂಬಾತನನ್ನು ಪತ್ತೆ ಮಾಡಲು ಮಂಗಳೂರು ಸಿಸಿಬಿ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಾಗಲಕೋಟೆಯಲ್ಲಿ ಸುಮಾರು 5 ಕೋಟಿ ರೂ. ಗಳ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತನಿಖೆಯ ವೇಳೆ ಈ ಜಾಲಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಾಲ್ಕನೇ ಆರೋಪಿ ಜಲೀಲ್ ಎಂಬಾತನಿಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಪೊಲೀಸರಿಗೆ ದೊರೆತ ಪ್ರಾಥಮಿಕ ಮಾಹಿತಿಗಳ ಪ್ರಕಾರ ಅಂಬ್ಯುಲೆನ್ಸ್ ಮೂಲಕ ಜಲೀಲ್ ಜಿಲ್ಲೆಯ ವಿವಿಧ ಸ್ಥಳಗಳಿಗೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ. ಈ ತಂಡದಲ್ಲಿದ್ದ ಇತರ ಆರೋಪಿಗಳು ಬಂಧಿತರಾದ ತಕ್ಷಣ ಜಲೀಲ್ ನಾಪತ್ತೆಯಾಗಿದ್ದ. ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ.
ಜಲೀಲ್ ಸಮಾಜ ಸೇವೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದ. ಸದ್ಯ ಡ್ರಗ್ಸ್ ದಂಧೆಯಲ್ಲಿ ಆತನ ಹೆಸರು ಕೇಳಿ ಬಂದಿದೆ. ಜಲೀಲ್ ಬಂಧನದ ಬಳಿಕ ಪ್ರಕರಣದ ಮತ್ತಷ್ಟು ಮಾಹಿತಿಗಳು ಹೊರಬೀಳಲಿವೆ.

