‘ಆಹಾರ ಸೇವನೆ’ ಬಗ್ಗೆ ನಿಮಗೆಷ್ಟು ಗೊತ್ತು? ಹೇಗೆ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ ಗೊತ್ತಾ?
ಆಹಾರ ಸೇವನೆ ಮಾನವನಿಂದ ಹಿಡಿದು ಜೀವವಿರುವ ಪ್ರತಿಯೊಂದು ಪ್ರಾಣಿಯ ದೈನಂದಿನ ದಿನಚರಿ. ಆಹಾರದ ಹೊರತಾಗಿ ಜೀವಿಸುವುದು ಅಸಾಧ್ಯ ಎನ್ನುವುದು ಸತ್ಯ.
ಹಾಗಾದರೆ ಬದುಕಿಗೆ ಅತಿ ಮುಖ್ಯವಾದ ಆಹಾರ ಸೇವನೆಯ ಕ್ರಮ ಹೇಗಿದ್ದರೆ ಆರೋಗ್ಯಪೂರ್ಣರಾಗಿ ಜೀವನ ನಡೆಸಬಹುದು ಎಂಬುದನ್ನು ನಾವಿಲ್ಲಿ ಗಮನಿಸೋಣ.
ನಾವು ಯಾವ ಸಮಯದಲ್ಲಿ ಆಹಾರ ಸೇವನೆ ಮಾಡುತ್ತೇವೆ ಎನ್ನುವುದಕ್ಕಿಂತ ಹೆಚ್ಚು ಮುಖ್ಯವಾಗಿ ನಾವು ಎಂತಹ ಆಹಾರ ಸೇವಿಸುತ್ತೇವೆ ಎನ್ನುವುದರತ್ತ ಗಮನ ನೀಡಬೇಕು. ಆಹಾರ ಪದ್ಧತಿ, ಸೇವಿಸುವ ಆಹಾರದ ಗುಣಮಟ್ಟ, ನಮ್ಮ ದೈನಂದಿನ ಚಟುವಟಿಕೆ, ನಿದ್ರೆ, ವಯಸ್ಸು ಮತ್ತು ಆರೋಗ್ಯ ಸ್ಥಿತಿ ಎಷ್ಟು ಚೆನ್ನಾಗಿರುತ್ತದೋ ನಮ್ಮ ದೇಹವೂ ಅಷ್ಟೇ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಸತ್ಯವಾದ ಮಾತು.
ಆರೋಗ್ಯವಂತ ಯುವಜನತೆ ತಮ್ಮ ದಿನಚರಿ ಮತ್ತು ಪೌಷ್ಟಿಕಾಂಶದ ಅಗತ್ಯಗಳಿಗೆ ಸೂಕ್ತವಾಗುವಂತಹ ಆಹಾರಗಳನ್ನು ಸಮಯದ ನಿರ್ಬಂಧಗಳಿಗೆ ಒಳಪಡದೆ ಸೇವನೆ ಮಾಡಿದರೂ ಉತ್ತಮ ಆರೋಗ್ಯ ಪಡೆಯಬಹುದು. ಆದರೆ ಮಕ್ಕಳು, ಗರ್ಭಿಣಿ, ಬಾಣಂತಿಯರು, ವೃದ್ಧರು, ಅನಾರೋಗ್ಯ ಪೀಡಿತರು ನಿಯಮಿತ ಸಮಯಕ್ಕೆ ಅಹಾರ ಸೇವನೆ ಮಾಡುವುದು ಬಹಳ ಮುಖ್ಯ. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯವಾಗುತ್ತದೆ. ಇದರಿಂದ ಸ್ನಾಯುಗಳಿಗೆ ಶಕ್ತಿ ದೊರೆಯುತ್ತದೆ.
ಕೆಲವು ಜನರಿಗೆ ಒಂದು ಹೊತ್ತು ಆಹಾರ ತ್ಯಜಿಸುವ ಅಭ್ಯಾಸ ಇರುತ್ತದೆ. ಇದು ಆರಂಭದಲ್ಲಿ ಯಾವುದೇ ಅಡ್ಡ ಪರಿಣಾಮಗಳನ್ನು ಮಾಡದೇ ಇದ್ದರು ಕ್ರಮೇಣ ಹೆಚ್ಚು ಹಸಿವಾಗುವುದು, ಏಕಾಗ್ರತೆಯ ಮೇಲೆ ದುಷ್ಪರಿಣಾಮ, ತಲೆನೋವು, ಆಯಾಸ, ಕಿರಿಕಿರಿ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುವ ಅಪಾಯವೂ ಇದೆ.
ನಾವು ಸೇವನೆ ಮಾಡುವ ಆಹಾರ ಪ್ರೊಟೀನ್, ಫೈಬರ್, ಆರೋಗ್ಯಕರ ಕೊಬ್ಬು ಸೇರಿದಂತೆ ಹೆಚ್ಚು ಪೌಷ್ಟಿಕಾಂಶಗಳ ಮೂಲವಾಗಿದ್ದಲ್ಲಿ ಆರೋಗ್ಯದ ದೃಷ್ಟಿಯಿಂದ ಅನುಕೂಲ. ತರಕಾರಿ, ಹಣ್ಣುಗಳು, ಹಾಲು, ಮೊಸರು, ಹಾಲಿನ ಇನ್ನಿತರ ಉತ್ಪನ್ನಗಳು, ದ್ವಿದಳ ಧಾನ್ಯಗಳು, ಬೀಜಗಳು, ಮೊಟ್ಟೆ, ಮೀನು ಇತ್ಯಾದಿಗಳ ಸೇವನೆಯಿಂದ ನಮ್ಮ ದೇಹವನ್ನು ಹೆಚ್ಚು ಪೌಷ್ಟಿಕಾಂಶಯಿಕ್ತವಾಗಿ, ಸದೃಢವಾಗಿ ಕಾಪಾಡಿಕೊಳ್ಳುವುದು ಸಾಧ್ಯ.
ಸಕ್ಕರೆಯಿಂದ ತುಂಬಿದ ಆಹಾರ ವಸ್ತುಗಳು, ಕರಿದ ಆಹಾರ ವಸ್ತುಗಳು, ಸಿಹಿ ಪಾನೀಯಗಳು, ಪೇಸ್ಟ್ರಿಗಳಂತಹ ವಸ್ತುಗಳು ಆರೋಗ್ಯದ ದೃಷ್ಟಿಯಿಂದ ಸೇವನೆಗೆ ಒಳ್ಳೆಯದಲ್ಲ. ಇವುಗಳ ನಿಯಮಿತ ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಆರೋಗ್ಯ ಇದ್ದರೆ ಎಲ್ಲವನ್ನೂ ಗಳಿಸಬಹುದು. ಆಹಾರ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಆರೋಗ್ಯಪೂರ್ಣ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡಲ್ಲಿ ಸದೃಢ ಬದುಕು ಸಾಧ್ಯ. ಆರೋಗ್ಯವೇ ಮಹಾಭಾಗ್ಯ.

