ಮೂಡುಬಿದಿರೆ: ತನ್ನ ಅಕ್ಕನ ಜತೆ ಕರೆ ಮಾಡಿ ಮಾತನಾಡುತ್ತಲೇ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಣಿಲ್ ಎಂಬಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಯ್ಯದ್ ಅನ್ವರ್(25) ಎಂದು ಗುರುತಿಸಲಾಗಿದೆ.
ಅನ್ವರ್ ಕೆಲ ಸಮಯದಿಂದ ತನ್ನ ಪತ್ನಿ ಮತ್ತು ಪುಟ್ಟ ಮಗುವಿನ ಜೊತೆಗೆ ಬೆಳುವಾಯಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೀನಿನ ಟೆಂಪೋ ಚಾಲಕರಾಗಿ ಅವರು ಕೆಲಸ ಮಾಡುತ್ತಿದ್ದರು. ಕೆಲ ಸಮಯದಿಂದ ಉದ್ಯೋಗ ಇಲ್ಲದೆ ಮನೆಯಲ್ಲೇ ಇದ್ದರು. ಈ ಸಮಯದಲ್ಲಿ ಪತಿ ಪತ್ನಿಯ ನಡುವೆ ಕೌಟುಂಬಿಕ ಕಲಹ ಆರಂಭವಾಗಿದೆ.
ಪತಿ ಪತ್ನಿಯರ ನಡುವಿನ ಜಗಳ ಪೊಲೀಸ್ ಠಾಣೆಯ ಮೆಟ್ಟಿಲು ಸಹ ಹತ್ತಿತ್ತು. ಇವೆಲ್ಲದರಿಂದ ಅನ್ವರ್ ಸಾಕಷ್ಟು ನೊಂದಿದ್ದರು ಎಂದು ತಿಳಿದು ಬಂದಿದೆ. ಗುರುವಾರ ಮತ್ತೆ ದಂಪತಿ ನಡುವೆ ಜಗಳವಾಗಿದ್ದು, ಪತ್ನಿ ಮಗುವನ್ನು ಕರೆದುಕೊಂಡು ತವರು ಮನೆ ಸೇರಿದ್ದರು. ಇದರಿಂದಲೂ ಅನ್ವರ್ ಬಹಳಷ್ಟು ನೊಂದಿದ್ದರು ಎಂದು ಹೇಳಲಾಗುತ್ತಿದೆ.
ಇದಾದ ಬಳಿಕ ಅನ್ವರ್ ತನ್ನ ಅಕ್ಕನಿಗೆ ಕರೆ ಮಾಡಿ ಮಾತನಾಡುತ್ತಲೇ ನೇಣಿಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಪತ್ನಿಯ ಮನೆಯವರ ಕಿರುಕುಳವೇ ಕಾರಣ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಕ್ಕನಲ್ಲಿ ಹೇಳಿದ್ದಾಗಿ ತಿಳಿದು ಬಂದಿದೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

