ಮಳೆಗಾಲ ಬಂತೆಂದರೆ ಸಾಕು, ಪ್ರಕೃತಿ ಹಸಿರಾಗುವುದರ ಜೊತೆಗೆ ನದಿ, ಕೆರೆ, ಸಾಗರ, ಹಳ್ಳ, ಕೊಳ್ಳಗಳು ತುಂಬಿ ತುಳುಕಿ ಹರಿಯುವುದನ್ನು ನೋಡುವುದೇ ಮನಸ್ಸಿಗೆ ಮುದ. ಮಳೆಗಾಲದಲ್ಲಿ ಕಣ್ಮನಸೆಳೆಯುವ ಮತ್ತೊಂದು ಅಂಶವೆಂದರೆ ಜಲಪಾತಗಳು.
ಬೇಸಿಗೆಯಲ್ಲಿ ಒಣಗಿ ಬತ್ತಿ ಹೋಗುವ ಅಥವಾ ಸ್ವಲ್ಪವೇ ನೀರಿನಿಂದ ಕಾಣುವ ಜಲಪಾತಗಳು ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ಚಂದ ಮನಸ್ಸು, ಕಣ್ಣಿಗೆ ಆನಂದ ನೀಡುತ್ತವೆ. ಅಂತಹ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಯಾರಿಗೆ ತಾನೇ ಆಸೆ ಇರುವುದಿಲ್ಲ ಹೇಳಿ.
ಈಗ ಮಳೆಗಾಲ. ಪಶ್ಚಿಮ ಘಟ್ಟಗಳಲ್ಲಿಯೂ ಮಳೆಯ ಅಬ್ಬರ ಜೋರಾಗಿಯೇ ಇದೆ. ಜೋರಾಗಿ ಸುರಿವ ಮಳೆಯ ಕಾರಣಕ್ಕೆ ಘಟಪ್ರಭಾ ನದಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಗೋಕಾಕ ಫಾಲ್ಸ್, ಬಟವಾಡೆ ಜಲಪಾತಗಳಲ್ಲಿ ನೀರು ಝರಿ ಝರಿಯಾಗಿ ಕೆಳಕ್ಕೆ ಧುಮ್ಮಿಕ್ಕುವ ಸೌಂದರ್ಯವನ್ನು ಸವಿಯಲು ಯಾರಿಗೆ ತಾನೇ ಮನಸ್ಸಾಗುವುದಿಲ್ಲ ಅಲ್ಲವೇ.
ಭಾರೀ ಮಳೆಯ ಕಾರಣದಿಂದಲೇ ಈ ಜಲಪಾತಗಳಿಗೆ ಮತ್ತೆ ಚೈತನ್ಯ ಬಂದಿದೆ. ಬಂಡೆಯ ಮೇಲಿಂದ ಕೆಳಕ್ಕೆ ಧುಮುಕಿ ಮುಂದೆ ಸಾಗುವ ನೀರಿನ ಸೌಂದರ್ಯವನ್ನು ಸವಿಯುವ ಪ್ರವಾಸಿಗರಿಗೆ ಮಾತ್ರ ಈ ಪ್ರದೇಶಗಳಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆ ಯಾವುದೇ ಅಪಾಯ ಸಂಭವಿಸಬಾರದು ಎನ್ನುವ ಕಾರಣಕ್ಕೆ ಈ ಪ್ರದೇಶಗಳಿಗೆ ನಿರ್ಬಂಧ ಹೇರಿರುವುದಾಗಿದೆ. ಕೆಲವು ಪ್ರವಾಸಿಗರ ಹುಚ್ಚಾಟದಿಂದ ಅಪಾಯಗಳು ಸಂಭವಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿದ್ದು, ಇಂತಹ ಯಾವುದೇ ಅಪಾಯಗಳಿಗೆ ಎಡೆಮಾಡಿಕೊಡಬಾರದು ಎನ್ನುವ ಸದುದ್ದೇಶದಿಂದ ಈ ಪ್ರದೇಶಗಳಿಗೆ ಹೋಗುವುದಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಜಲಪಾತಗಳು ಪ್ರವಾಸಿಗರ ಆಗಮನವಿಲ್ಲದೆ ಬಣಗುಟ್ಟುತ್ತಿವೆ.
ಜಲಪಾತಗಳ ನೈಜ ಸೌಂದರ್ಯವನ್ನು ಸವಿಯಲು ಸರಿಯಾದ ಸಮಯ ಮಳೆಗಾಲ ಮತ್ತು ಮಳೆಗಾಲ ಕಳೆದ ಬಳಿಕದ ಒಂದೆರಡು ತಿಂಗಳುಗಳು ಮಾತ್ರ. ಈ ಸಮಯದಲ್ಲಿ ನೀರು ಧರೆಯಿಂದ ಹಾರಿ ನೊರೆ ನೊರೆಯಾಗಿ ಭೂಮಿಗಿಳಿಯುವ ಅಂದವನ್ನು ಕಾಣುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಅದನ್ನು ನೋಡಲು ಹೋಗುವ ಕೆಲವು ಜನರ ಹುಚ್ಚಾಟದ ಕಾರಣಕ್ಕೆ ಸೌಜನ್ಯಯುತವಾಗಿ ನಡೆದುಕೊಳ್ಳುವವರಿಗೂ ಈ ಅವಕಾಶ ತಪ್ಪಿ ಹೋಗುತ್ತಿದೆ ಎನ್ನುವುದೇ ಬೇಸರದ ಸಂಗತಿ.

