ಮನೆಯಲ್ಲಿ ಬಡತನ, ಹೆತ್ತವರಿಗೆ ಅಕ್ಷರ ಜ್ಞಾನ ಇಲ್ಲದಿದ್ದರೂ ಓದಬೇಕು, ಸಾಧಿಸಬೇಕು ಎನ್ನುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಚಿತ್ರದುರ್ಗದ ರೈತನ ಮಗ, ಉಡುಪಿಯ ಯುವ ನ್ಯಾಯವಾದಿಯ ಸಾಹಸಗಾಥೆ ಎಲ್ಲರಿಗೂ ಪ್ರೇರಣೆ.
ನಿನ್ನೆ ಪ್ರಕಟವಾದ ನ್ಯಾಯಾಂಗ ಪರೀಕ್ಷೆಯ ಫಲಿತಾಂಶದಲ್ಲಿ, ಚಿತ್ರದುರ್ಗದ ರೈತನ ಮಗ , ಉಡುಪಿಯ ಯುವ ವಕೀಲ ಸುಕೇಂದ್ರ ಪಿ ಎಂ (33) ರಾಜ್ಯಕ್ಕೆ 63 ನೇ ರ್ಯಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ.
ಉಡುಪಿಯಲ್ಲಿ ಏಳು ವರ್ಷಗಳಿಂದ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಕೇಂದ್ರ, ಪದವಿ, ಸ್ನಾತಕೋತ್ತರ, ಕಾನೂನು ಪದವಿಯನ್ನು ವಿದ್ಯಾರ್ಥಿವೇತನ ಸಹಾಯದಿಂದ ಪೂರ್ಣಗೊಳಿಸಿದವರು. ತಂದೆ ಪೂಜಾರಿ ಮಾರಣ್ಣ, ತಾಯಿ ನಾಗೇಂದ್ರಮ್ಮ ಚಿತ್ರದುರ್ಗ ಜಿಲ್ಲೆಯ ಮೊಳಕಾಲೂರು ತಾಲೂಕಿನ ರಾಯಪುರ ಗ್ರಾಮದ ಸಣ್ಣ ರೈತ ಕುಟುಂಬದವರು.
ಚಿತ್ರದುರ್ಗದಲ್ಲಿ ಬಿ ಎಸ್ ಡಬ್ಲ್ಯೂ ಪದವಿ ಮುಗಿಸಿದ ಬಳಿಕ ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಪದವಿ ಪಡೆದರು. ನಂತರ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶಾನುಭಾಗ್ ಅವರ ನೆರವಿಂದ ಕಾನೂನು ಪದವಿ ಪಡೆದರು. ಉಡುಪಿ ವಕೀಲರ ಸಂಘದಿಂದ ಪರೀಕ್ಷೆ ಎದುರಿಸಲು ಬೇಕಾದ ತರಬೇತಿ ವ್ಯವಸ್ಥೆ ತುಂಬಾ ಅನುಕೂಲವಾಯಿತು. ನಂತರ ಹಿರಿಯ ನ್ಯಾಯವಾದಿ ಮುರಳೀಧರ ವಾರಂಬಳ್ಳಿ ಅವರ ಬಳಿ ಜ್ಯೂನಿಯರ್ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು.
ಇತ್ತೀಚೆಗೆ ಒಂದು ವರ್ಷದ ಹಿಂದೆ ಮಂದಾರ್ತಿ ಮೂಲದ ನ್ಯಾಯವಾದಿ ಸವಿತಾ ಅವರನ್ನು ವಿವಾಹವಾಗಿದ್ದಾರೆ. ಹೆತ್ತವರ ಪ್ರೋತ್ಸಾಹ, ಪ್ರತಿದಿನ ಓದಲು ನೆರವಾದ ಪತ್ನಿಯ ಬಗ್ಗೆ ಸುಕೇಂದ್ರ ಅವರಿಗೆ ಹೆಮ್ಮೆ ಇದೆ.
ಕಠಿಣ ಪರಿಶ್ರಮ, ಇಚ್ಛಾಶಕ್ತಿ, ಸಾಧಿಸುವ ಛಲ ಇದ್ದರೆ ಸಾಧನೆಗೆ ಬೇರೆ ಯಾವ ವಿಷಯಗಳು ಅಡ್ಡಿಯಾಗಲು ಸಾಧ್ಯವಿಲ್ಲ ಎನ್ನುವುದಕ್ಕೆ ಸುಕೇಂದ್ರ ಅವರೇ ಸಾಕ್ಷಿ.

