ಮಂಗಳೂರು: ಅತ್ಯಾಚಾರದಂತಹ ಕೃತ್ಯಗಳಿಗೆ ಪೋರ್ನೋಗ್ರಫಿ, ನಶೆ ಮತ್ತಿತರ ಕಾರಣಗಳೂ ಇವೆ. ಸ್ಮಾರ್ಟ್ ಫೋನ್ಗಳ ಬಳಕೆಯೂ ಇಂತಹ ಪ್ರಕರಣಗಳಲ್ಲಿ ಕೆಟ್ಟ ಪಾತ್ರ ವಹಿಸುತ್ತಿದೆ” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಪೊಲೀಸರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಈಗಾಗಲೇ ವರದಿ ಕೇಳಿದೆ. ಎಸ್ಐಟಿ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹಲವು ಬಾರಿ ಸಭೆಗಳನ್ನು ನಡೆಸಲಾಗಿದೆ. ಕಾಣೆಯಾದವರು ಎಲ್ಲಿಗೆ ಹೋದರು? ಸಾವಿಗೀಡಾಗಿದ್ದರೆ ಅದು ಸಂಭವಿಸಿದ್ದು ಹೇಗೆ ಎಂಬಿತ್ಯಾದಿ ವಿವರಗಳು ಬೇಕಾಗಿದೆ. ಇದು ಕಷ್ಟದ ಕೆಲಸವಾದರೂ ಮಾಹಿತಿ ತಿಳಿಯಲೇಬೇಕಾಗಿದೆ ಎಂದು ಅವರು ತಿಳಿಸಿದರು.

