ಕಾರ್ಕಳ: ಅಜೆಕಾರು ಪದ್ಧಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅವರು ತಾಯಿ ಪದ್ಮಾ ಶೆಟ್ಟಿಯವರ ನೂರನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಹಾಗೂ ತಂದೆ ತಾಯಿ ಕಂಡ ಕನಸಿನಂತೆ ಹುಟ್ಟೂರು ಅಜೆಕಾರಿನ ಬಡಮಕ್ಕಳ ಜ್ಞಾನದ ಹಸಿವು ನೀಗಿಸಲು ನಿರ್ಮಿಸಿದ ‘ಜ್ಞಾನಸುಧಾ ಜ್ಞಾನ ದೇಗುಲ’ ಇಂದು (ಏ.14 ) ಸಂಜೆ 5.30 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

9ನೇ ತರಗತಿಯಿಂದ 12ನೇ ತರಗತಿಯವರೆಗೆ ಗುಣಮಟ್ಟದ ಹಾಗೂ ಮೌಲ್ಯಾಧರಿತ ಶಿಕ್ಷಣ ನೀಡುವ ಗುರಿಯೊಂದಿಗೆ ಹಾಗೂ ಮರ್ಣೆ ಗ್ರಾಮದ ಪ್ರತಿಭಾನ್ವಿತ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದೊಂದಿಗೆ 4ನೇ ಕ್ಯಾಂಪಸ್ ನಿರ್ಮಿಸಲಾಗಿದೆ. ಡಾ.ಸುಧಾಕರ ಶೆಟ್ಟಿ ಅವರ ತಾಯಿಯ ಹುಟ್ಟಿದ ದಿನವಾದ ಏ.14 ರಂದು ಈ ಕ್ಯಾಂಪಸ್ ಉದ್ಘಾಟನೆ ಗೊಳ್ಳುತ್ತಿರುವುದು ವಿಶೇಷವಾಗಿದೆ. ಸಮಾಜಕ್ಕೆ ಜ್ಞಾನದ ಬೆಳಕಿನ ಜತೆಗೆ ಆಧ್ಯಾತ್ಮಿಕ ಚಿಂತನೆಯನ್ನು ಪಸರಿಸುವ ನಿಟ್ಟಿನಲ್ಲಿ ಶಾಲೆಯ ಕ್ಯಾಂಪಸ್ಗೆ ಹೊಂದಿಕೊಂಡು ಮಹಾಗಣಪತಿಯ ಸುಂದರ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಏ.12ರಂದು ನೆರವೇರಿಸಲಾಗಿದೆ . ಇದರ ಪೂರ್ವ ಭಾವಿಯಾಗಿ ಏ.10ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗಿದೆ .

ಇಂದಿನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಆಳ್ವಾಸ್ ಚೇರ್ಮನ್ ಮೋಹನ್ ಆಳ್ವಾ, ನಿಟ್ಟೆ ಯೂನಿವರ್ಸಿಟಿಯ ಕುಲಪತಿ ವಿಶಾಲ್ ಹೆಗ್ಡೆ, ಮಹಾಗಣಪತಿ ದೇವಸ್ಥಾನದ ಗೌರವ ಅಧ್ಯಕ್ಷರಾದ ಜಿ ಶಿವರಾಮ್ ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ.

