ಉಡುಪಿ ಜಿಲ್ಲೆಯಾದ್ಯಂತ ಶಾಲಾ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಪೊಲೀಸ್ ಇಲಾಖೆ ಜುಲೈ 20ರಿಂದ 27ರವರೆಗೆ ವಿಶೇಷ ಶಾಲಾ-ಕಾಲೇಜು ವಾಹನಗಳ ತಪಾಸಣೆ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ನಡೆಸಿದೆ.ಈ ಕಾರ್ಯಾಚರಣೆಯಲ್ಲಿ 204 ಬಸ್ಗಳು, 69 ಮಿನಿ ಬಸ್ಗಳು, 65 ಆಟೋರಿಕ್ಷಾಗಳು ಹಾಗೂ 33 ಕಾರುಗಳು ಸೇರಿದಂತೆ ವಿವಿಧ ಶಾಲಾ ವಾಹನಗಳನ್ನು ಪರಿಶೀಲಿಸಲಾಗಿದೆ.
ತಪಾಸಣೆಯ ವೇಳೆ 29 ವಾಹನಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಸಾಗಿಸುತ್ತಿರುವುದು, 5 ವಾಹನಗಳ ಚಾಲಕರು ಸಮವಸ್ತ್ರ ಧರಿಸದೇ ವಾಹನ ಚಲಾಯಿಸಿರುವುದು ಸೇರಿದಂತೆ ಒಟ್ಟು 43 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿವೆ. ಸಂಬಂಧಿತ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು ₹30,800 ದಂಡ ವಿಧಿಸಲಾಗಿದೆ.
ಇದಲ್ಲದೆ, ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿದ ಪೊಲೀಸರು 295 ಬಸ್ಗಳು, 69 ಮಿನಿ ಬಸ್ಗಳು ಹಾಗೂ 34 ಕಾರುಗಳ ದಾಖಲೆಗಳು, ಸುರಕ್ಷತಾ ಉಪಕರಣಗಳು ಮತ್ತು ಸರ್ಕಾರದ ಮಾರ್ಗಸೂಚಿಗಳ ಅನುಸರಣೆಯನ್ನು ಪರಿಶೀಲಿಸಿದರು.
ಈ ವೇಳೆ ಚಾಲಕರು ಮತ್ತು ಕಂಡಕ್ಟರ್ಗಳಿಗೆ ಶಾಲಾ ಮಕ್ಕಳ ಸುರಕ್ಷತೆ, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಯಿತು.
ಶಾಲಾ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಅತ್ಯುನ್ನತ ಆದ್ಯತೆ ನೀಡಿರುವ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಇಂತಹ ವಿಶೇಷ ತಪಾಸಣೆ ಹಾಗೂ ಜಾಗೃತಿ ಅಭಿಯಾನವನ್ನು ಮುಂದುವರಿಸುವುದಾಗಿ ತಿಳಿಸಿದೆ. ಶಾಲಾ ಆಡಳಿತ ಮಂಡಳಿಗಳು, ವಾಹನ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

