ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದಲ್ಲಿ ಅನ್ನಭಾಗ್ಯ ಯೋಜನೆಯ ಉಚಿತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ವಸಂತ ಕುಮಾರ್, ಕೋಟ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಮಹಾಲಕ್ಷ್ಮೀ ಹೋಟೆಲ್ ಎದುರು KA-47-5533 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಲಾರಿಯನ್ನು ತಡೆದು ಪರಿಶೀಲಿಸಿದರು.ಪರಿಶೀಲನೆ ವೇಳೆ ಸುಮಾರು 320 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 160 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಪರವಾನಿಗೆ ಇಲ್ಲದೆ ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.
ಅಂದಾಜು ₹3.84 ಲಕ್ಷ ಮೌಲ್ಯದ ಅಕ್ಕಿ ಹಾಗೂ ₹3.50 ಲಕ್ಷ ಮೌಲ್ಯದ ಲಾರಿಯನ್ನು ಸೇರಿ ಒಟ್ಟು ₹7.34 ಲಕ್ಷ ಮೌಲ್ಯದ ಸೊತ್ತನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ, ಪಿಡಿಎಸ್ ನಿಯಂತ್ರಣ ಆದೇಶ 2016 ಹಾಗೂ ಬಿಎನ್ಎಸ್ 2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.

