ಬ್ರಹ್ಮಾವರ: ಕೇವಲ ₹1,800 ಸಾಲದ ಕಂತು ಬಾಕಿ ಉಳಿಸಿಕೊಂಡಿದ್ದರೆಂಬ ಕಾರಣಕ್ಕೆ ಸಾಲದ ಜಾಮೀನುದಾರನನ್ನು ಕಾರಿನಲ್ಲಿ ಅಪಹರಿಸಿ, ಕಬ್ಬಿಣದ ರಾಡ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಬೈಕ್ ಎತ್ತೊಯ್ದಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲ್ಕಿ ಮೂಲದ ‘ಸಾನಿಧ್ಯ ಫೈನಾನ್ಸ್’ ಸಂಸ್ಥೆಯಿಂದ ದೂರುದಾರರ ಸ್ನೇಹಿತ 2026ರ ಫೆಬ್ರವರಿ ತಿಂಗಳಲ್ಲಿ ತಮ್ಮ ತಾಯಿಯ ಚಿಕಿತ್ಸೆಗಾಗಿ ₹20,000 ಸಾಲ ಪಡೆದಿದ್ದರು. ಈ ಸಾಲಕ್ಕೆ ದೂರುದಾರರು ಜಾಮೀನುದಾರರಾಗಿ ಸಹಿ ಮಾಡಿದ್ದರು. ಅವರು ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಾ ಬಂದಿದ್ದು, 2026ರ ಜುಲೈ ತಿಂಗಳ ಕಂತಿನಲ್ಲಿ ಕೇವಲ ₹1,800 ಹಣ ಪಾವತಿಸಲು ಬಾಕಿ ಇತ್ತು. ಈ ಬಾಕಿ ಹಣಕ್ಕಾಗಿ ಫೈನಾನ್ಸ್ ಸಂಸ್ಥೆಯವರು ಸತತವಾಗಿ ಕೆಟ್ಟದಾಗಿ ಬೈದು ಕಿರುಕುಳ ನೀಡುತ್ತಿದ್ದರೆನ್ನಲಾಗಿದೆ.
ಕಾರಿನಲ್ಲಿ ಅಪಹರಿಸಿ ರೌಡಿ ಶೈಲಿಯಲ್ಲಿ ಹಲ್ಲೆ
ಜುಲೈ 31ರಂದು ಮಧ್ಯಾಹ್ನ ವೇಳೆಗೆ ದೂರುದಾರರು ಬಾರ್ ಒಂದರ ಎದುರು ನಿಂತಿದ್ದಾಗ, ಬಿಳಿ ಬಣ್ಣದ ಈಕೋ ಸ್ಪೋರ್ಟ್ಸ್ ಕಾರಿನಲ್ಲಿ ಬಂದ ಸಂದೀಪ್ ಶೆಟ್ಟಿ ಹಾಗೂ ಆತನ ಜೊತೆಗಿದ್ದ 7 ಜನರ ಗುಂಪು ಅವರನ್ನು ಬಲವಂತವಾಗಿ ಕಾರಿಗೆ ತಳ್ಳಿಕೊಂಡು ಕರೆದೊಯ್ದಿದೆ. ಚಲಿಸುವ ಕಾರಿನಲ್ಲಿ ಸಂದೀಪ್ ಶೆಟ್ಟಿ ಕಬ್ಬಿಣದ ರಾಡ್ನಿಂದ ಹಾಗೂ ಇತರರು ಕೈಯಿಂದ ದೂರುದಾರರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಸಾಲಗಾರ ಗಣೇಶ್ ಎಲ್ಲಿದ್ದಾನೆ ಎಂದು ಗದರಿಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ.
ಬೈಕ್ ಅಕ್ರಮ ವಶ, ಆಸ್ಪತ್ರೆಗೆ ದಾಖಲು
ಬೆದರಿಕೆಯೊಡ್ಡಿ ದೂರುದಾರರಿಂದ ಅವರ ಪಲ್ಸರ್ ಬೈಕ್ ಇದ್ದ ಸ್ಥಳವನ್ನು ತಿಳಿದುಕೊಂಡ ಆರೋಪಿಗಳು, ಆ ಬೈಕನ್ನು ಅಕ್ರಮವಾಗಿ ಗೂಡ್ಸ್ ರಿಕ್ಷಾದಲ್ಲಿ ಹೇರಿಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಗಾಯಗೊಂಡ ದೂರುದಾರರು ತಕ್ಷಣವೇ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ತೆರಳಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ತಿಂಗಳಿಗೆ 13 % ಬಡ್ಡಿ, ತಪ್ಪಿದಲ್ಲಿ ದೌರ್ಜನ್ಯ !
ಮೇಲ್ನೋಟಕ್ಕೆ ಇದೊಂದು ಕರಾಳ ಬಡ್ಡಿ ದಂಧೆಯ ಬಹು ದೊಡ್ಡ ನೆಟ್ವರ್ಕ್ ಮಾದರಿಯ ವ್ಯವಸ್ಥೆಯಾಗಿದ್ದು, ಕೋಟ್ಯಂತರ ಹಣ ಸಾಲವಾಗಿ ನೀಡಿರುವ ಮಾಹಿತಿ ಇದ್ದು ತಿಂಗಳಿಗೆ 13% ನಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಈ ಜಾಲಕ್ಕೆ ಸಿಕ್ಕಿರುವವರು ಸಾಲವಾಗಿ ಪಡೆದಿರುವುದು ಕೇವಲ 20, 30, 50 ಸಾವಿರ ಅಷ್ಟೇ. ಸರಿಯಾದ ಸಮಯದಲ್ಲಿ ಬಡ್ಡಿ , ಕಂತು ಪಾವತಿಸದೆ ಇದ್ದಲ್ಲಿ ಸಾಲಗಾರ ಮತ್ತು ಜಾಮೀನುದಾರ ಇಬ್ಬರನ್ನು ಅವಾಚ್ಯವಾಗಿ ನಿಂದಿಸಿ ಬೆದರಿಸುವ ಕೆಲಸ ಮಾಡಲಾಗುತ್ತದೆ. ಅಲ್ಲದೆ ಸಾಲಗಾರ ಮತ್ತು ಜಾಮೀನುದಾರರಿಗೆ ಸಂಬಂಧಿಸಿದ ಸ್ವತ್ತುಗಳನ್ನು ಎಳೆದೊಯ್ಯಲಾಗುತ್ತದೆ. ಅಲ್ಲದೇ ಯುವತಿಯರ ಮೂಲಕವೂ ಬೆದರಿಸುವ ಪ್ರಯತ್ನಗಳನ್ನು ಮಾಡಲಾಗುತ್ತದೆ ಎಂಬುದು ಸಾಲಗಾರರ ಆರೋಪ.
ಘಟನೆಗೆ ಸಂಬಂಧಿಸಿದಂತೆ ಗಾಯಾಳು ದೂರುದಾರರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಇಂತಹ ಕರಾಳ ಬಡ್ಡಿ ದಂಧೆಯ ವಿರುದ್ಧ ಪೊಲೀಸರು ವಿಸ್ತೃತ ತನಿಖೆ ಕೈಗೊಂಡು ಆರೋಪಿ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

