ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರ ವಿರುದ್ಧ ದಾಖಲಿಸಲಾಗಿದ್ದ ವಿಚ್ಛೇದನ ಅರ್ಜಿಯನ್ನು ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರು ಹಿಂಪಡೆದಿದ್ದಾರೆ. ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಸಂಗೀತ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಅರ್ಜಿಯನ್ನು ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದ್ದು, ನ್ಯಾಯಾಲಯವು ಪ್ರಕರಣವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿದೆ.
ಫೆಬ್ರವರಿಯಲ್ಲಿ ಸಂಗೀತ ಅವರು ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಲು ಕೋರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ಪರಸ್ಪರ ಹೊಂದಾಣಿಕೆಯಾಗದ ಭಿನ್ನಾಭಿಪ್ರಾಯಗಳನ್ನು ಕಾರಣವಾಗಿ ನೀಡಿದ್ದ ಅವರು, ಜೀವನಾಂಶ ಹಾಗೂ ಚೆನ್ನೈನ ನೀಲಂಕರೈನಲ್ಲಿರುವ ದಂಪತಿಯ ಜಂಟಿ ನಿವಾಸದಲ್ಲಿ ವಾಸ ಮುಂದುವರಿಸಲು ಅನುಮತಿ ಕೋರಿದ್ದರು.
ವಿಜಯ್ ಹಾಗೂ ಸಂಗೀತ ನಡುವಿನ ದಾಂಪತ್ಯ ವಿವಾದದ ವಿಚಾರಣೆಯು ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಕಳೆದ ತಿಂಗಳು ನಡೆದ ಕಲಾಪದ ವೇಳೆ ಇಬ್ಬರೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್ 7 ಕ್ಕೆ ನಿಗದಿಪಡಿಸಿದ್ದರು. ಆಗಸ್ಟ್ 7 ರಂದು ನಡೆದ ವಿಚಾರಣೆಯಲ್ಲಿ ಸಂಗೀತ ಅವರು ಅರ್ಜಿಯನ್ನು ಮುಂದುವರಿಸಲು ಇಷ್ಟವಿಲ್ಲ ಎಂದು ಕೋರ್ಟ್ಗೆ ಸ್ಪಷ್ಟಪಡಿಸಿದರು. ವಿಜಯ್ ಅವರ ಪರ ವಕೀಲರು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ಕಾರಣ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಪ್ರಕರಣಕ್ಕೆ ತೆರೆ ಎಳೆದಿದೆ.

