ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿಯಲ್ಲಿ ನಡೆದಿದೆ. ಮೃತರನ್ನು ಕಲ್ಮಾಡಿ ನಿವಾಸಿ ರತ್ನಾ ಅವರ ಪುತ್ರಿ, 27 ವರ್ಷದ ಕೃತಿ ಬಂಗೇರಾ ಎಂದು ಗುರುತಿಸಲಾಗಿದೆ.
ಕೃತಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಲ್ಲದೆ, ನಗರದ ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಸುಮಾರು ಐದು ತಿಂಗಳಿಂದ ಅವರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು ಎನ್ನಲಾಗಿದೆ.
ತಾಯಿ ರತ್ನಾ ನೀಡಿದ ದೂರಿನ ಪ್ರಕಾರ, ಆಗಸ್ಟ್ 6ರಂದು ಮಧ್ಯಾಹ್ನ ಮನೆಗೆ ಬಂದ ವೇಳೆ ಕೃತಿ ತಾಯಿಯನ್ನು ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಬಳಿಕ ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣ ಸಂಬಂಧಿಕರ ಸಹಾಯದಿಂದ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಬೆಡ್ರೂಮ್ನ ಫ್ಯಾನ್ಗೆ ವೇಲ್ ಕಟ್ಟಿಕೊಂಡು ನೇಣು ಬಿಗಿದ ಸ್ಥಿತಿಯಲ್ಲಿ ಕೃತಿ ಮೃತಪಟ್ಟಿರುವುದು ಕಂಡುಬಂದಿದೆ.
ಪ್ರಾಥಮಿಕ ಮಾಹಿತಿಯಂತೆ, ಕೃತಿ ಕಳೆದ ಕೆಲವು ದಿನಗಳಿಂದ ಮಾನಸಿಕ ಒತ್ತಡದಲ್ಲಿದ್ದರು ಎಂದು ತಿಳಿದುಬಂದಿದ್ದು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

