ನವದೆಹಲಿ: ಕೇಂದ್ರ ಸರ್ಕಾರವು ದೇಶದಲ್ಲಿ ಮೆಡಿಕಲ್ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯೊಂದನ್ನು ಇರಿಸಿದೆ.
2028-29ರ ಶೈಕ್ಷಣಿಕ ವರ್ಷದ ವೇಳೆಗೆ 5,000 ಹೆಚ್ಚುವರಿ ಸ್ನಾತಕೋತ್ತರ (PG) ವೈದ್ಯಕೀಯ ಸೀಟುಗಳನ್ನು, 5,023 ಹೊಸ ಎಂಬಿಬಿಎಸ್ (MBBS) ಸೀಟುಗಳನ್ನು ಹಂತ ಹಂತವಾಗಿ ಸೇರ್ಪಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದು, ಸದ್ಯ ದೇಶದಲ್ಲಿ 86,360 ಮೆಡಿಕಲ್ ಪಿಜಿ ಸೀಟುಗಳು ಲಭ್ಯವಿವೆ. ಹೊಸ ಸೀಟುಗಳ ಸೇರ್ಪಡೆಯೊಂದಿಗೆ ಈ ಸಂಖ್ಯೆ 90 ಸಾವಿರದ ಗಡಿ ದಾಟಲಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳು, ಪಿಜಿ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕೇಂದ್ರ ಪ್ರಾಯೋಜಿತ ಯೋಜನೆಯ ಮೂರನೇ ಹಂತದಡಿ ಈ ಸೀಟುಗಳನ್ನು ಹೆಚ್ಚಿಸಲಾಗುತ್ತಿದೆ ಎಂದಿದ್ದಾರೆ.
ಪ್ರತಿ ಹೊಸ ಪಿಜಿ ಸೀಟಿನ ನಿರ್ಮಾಣಕ್ಕೆ ನೀಡಲಾಗುವ ಗರಿಷ್ಠ ಆರ್ಥಿಕ ನೆರವನ್ನು 1.50 ಕೋಟಿ ರೂಗಳಿಗೆ ಏರಿಸಲಾಗಿದೆ. ಪಿಜಿ ಸೀಟುಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಒಟ್ಟು 10,092 ಸೀಟುಗಳಿವೆ. ಮಹಾರಾಷ್ಟ್ರದಲ್ಲಿ 9,216 ಮತ್ತು ತಮಿಳುನಾಡಿನಲ್ಲಿ 8,023 ಸೀಟುಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಇನ್ನು ದೇಶದ 823 ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸ್ತುತ 1,36,939 ಎಂಬಿಬಿಎಸ್ ಸೀಟುಗಳಿದ್ದು, ಈ ಪೈಕಿ 63,296 ಸರ್ಕಾರಿ ಸೀಟುಗಳಾಗಿವೆ. ಎಂಬಿಬಿಎಸ್ ಸೀಟುಗಳ ಸಂಖ್ಯೆಯಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ.
ಹೊಸ ಸೀಟುಗಳ ಹೆಚ್ಚಳದಿಂದ ವೈದ್ಯಕೀಯ ಶಿಕ್ಷಣದ ಅವಕಾಶಗಳು ವಿಸ್ತರಿಸುವುದರ ಜೊತೆಗೆ, ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಸುಧಾರಿಸುವ ನಿರೀಕ್ಷೆಯಿದೆ.

