ನವದೆಹಲಿ: ಕೇಂದ್ರ ಸರ್ಕಾರವು ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕರ್ನಾಟಕದ ಪರಿಶಿಷ್ಟ ಜಾತಿಯ(SC) ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕೃತ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಡಿ 1,178.20 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.
ಈ ಸಂಬಂಧ ರಾಜ್ಯಸಭೆಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, 2023-24ರಲ್ಲಿ 421.08 ಕೋಟಿ ರೂ., 2024-25ರಲ್ಲಿ 422.90 ಕೋಟಿ ರೂ. ಮತ್ತು 2025-26ರಲ್ಲಿ 334.22 ಕೋಟಿ ರೂ. ಕೇಂ ರಾಜ್ಯದ ಪಾಲನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಕಲ್ಯಾಣಕ್ಕಾಗಿ ನೀಡಿದ ಅನುದಾನದ ಕುರಿತು ರಾಜ್ಯಸಭೆಯಲ್ಲಿ ಕೇಳಲಾದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಅವರು ಈ ಉತ್ತರ ನೀಡಿರುವುದಾಗಿದೆ.
ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆ (ಡಿಎಪಿಎಸ್ಸಿ) ಕುರಿತೂ ಮಾಹಿತಿ ನೀಡಿರುವ ಅವರು, ನೀತಿ ಆಯೋಗವು ಈ ಯೋಜನೆಯಡಿ ಹಣವನ್ನು ಮೀಸಲಿಡುವಂತೆ 2017 ರಲ್ಲೇ ಮಾರ್ಗಸೂಚಿ ಹೊರಡಿಸಿರುವುದಾಗಿದೆ. ಅದರನ್ವಯ ಜವಾಬ್ದಾರಿಯುತ ಪ್ರತಿ ಸಚಿವಾಲಯ/ಇಲಾಖೆಯು ತನ್ನ ಆಯಾ ಯೋಜನೆಗಳ ಮೂಲಕ ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ʻಡಿಎಪಿಎಸ್ಸಿʼ ಅಡಿ ಅನುದಾನ ಮಂಜೂರು ಮಾಡುತ್ತದೆ ಎಂದು ತಿಳಿಸಿದ್ದಾರೆ.

