ಬೆಂಗಳೂರು: ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ಶಾಕಿಂಗ್ ವರದಿಯೊಂದು ಹೊರ ಬಿದ್ದಿದೆ. ವಿಶೇಷವಾಗಿ ಬೆಂಗಳೂರಿಗೆ ಸಂಬಂಧಿಸಿದ ಹಾಗೆ ಸಣ್ಣ ಮಕ್ಕಳಲ್ಲಿ ಜಠರ ಮತ್ತು ಕರುಳಿನ ಉರಿಯೂತದ ಸಮಸ್ಯೆ ಕಳೆದ ಹತ್ತು ವರ್ಷಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಆರೋಗ್ಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ರೋಗ ಪತ್ತೆ ಹಚ್ಚುವ ಸುಧಾರಿತ ತಂತ್ರಜ್ಞಾನಗಳು ಬಳಕೆಗೆ ಬಂದಿರುವುದು ಈ ಪ್ರಕರಣಗಳು ಬೇಗ ಬೆಳಕಿಗೆ ಬರಲು ಸಹಾಯ ಮಾಡುತ್ತಿವೆ. ಆದರೆ ನೈಜವಾಗಿ ಬಾಧಿತರಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸ್ಮೈಲ್ಸ್ ಗ್ಯಾಸ್ಟ್ರೋಎಂಟರಾಲಜಿ ಎಂಬ ಸಂಸ್ಥೆಯೊಂದರಲ್ಲೇ ಕಳೆದ ಐದು ವರ್ಷಗಳಲ್ಲಿ ಸುಮಾರು 886 ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಕಳೆದ ಆರು ತಿಂಗಳಿನಲ್ಲಿ ಈ ಸಮಸ್ಯೆಯ ಪ್ರಮಾಣ ಶೇ. 12 ರಷ್ಟು ಏರಿಕೆಯಾಗಿದೆ.
ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ಈ ಸಮಸ್ಯೆ ತೀವ್ರ ಏರಿಕೆ ಕಾಣುತ್ತಿದೆ. ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಹ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲೇ ಈ ಸಮಸ್ಯೆಗೆ ತುತ್ತಾಗುವವರು ಸಂಖ್ಯೆ ಹೆಚ್ಚು ಎಂದು ತಿಳಿದು ಬಂದಿದೆ.
ಜಂಕ್ಫುಡ್ ಸೇವನೆ, ಸಕ್ಕರೆ ತುಂಬಿದ ತಂಪು ಪಾನೀಯಗಳ ಸೇವನೆ, ಪ್ಯಾಕೇಟ್ನಲ್ಲಿ ತುಂಬಿಸಿಟ್ಟ ಆಹಾರಗಳ ನಿರಂತರ ಸೇವನೆ ಈ ಸಮಸ್ಯೆಗೆ ಕಾರಣ. ಜೊತೆಗೆ ದೇಹಕ್ಕೆ ಆರೋಗ್ಯ ನೀಡುವ ಆಟೋಟಗಳ ಕೊರತೆ,ಹೊಟ್ಟೆಯಲ್ಲಿರುವ ಪೌಷ್ಟಿಕ ಸೂಕ್ಷ್ಮಜೀವಿಗಳ ಸಮತೋಲನ ತಪ್ಪುವುದು, ಹಠಾತ್ ನಗರೀಕರಣ, ವಾಯು ಮಾಲಿನ್ಯ ಹಾಗೂ ಮನೆಯಲ್ಲಿ ಸಿಗರೇಟ್ ಹೊಗೆಗೆ ಗುರಿಯಾಗುವುದು ಇತ್ಯಾದಿಗಳು ಕರುಳಿನ ಉರಿಯೂತಕ್ಕೆ ಕಾರಣವಾಗುವ ಅಂಶಗಳಾಗಿವೆ.
ಪೋಷಕರೇ ಎಚ್ಚರ
ನ್ಮ್ಮ ಮಕ್ಕಳಲ್ಲಿ ಸುದೀರ್ಘ ಕಾಲ ಹೊಟ್ಟೆ ನೋವು, ನಿರಂತರ ಭೇದಿ, ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು, ದಿಢೀರ್ ತೂಕ ನಷ್ಟ, ಹಸಿವಾಗದಿರುವುದು ಹಾಗೂ ವಯಸ್ಸಿಗೆ ತಕ್ಕಂತೆ ಎತ್ತರ ಬೆಳೆಯದಿರುವ ಲಕ್ಷಣಗಳು ಕಂಡುಬಂದರೆ, ಅದನ್ನು ಸಾಮಾನ್ಯ ಹೊಟ್ಟೆಯ ಸೋಂಕು ಎಂದು ಭಾವಿಸಿ ನಿರ್ಲಕ್ಷಿಸಬೇಡಿ. ಅದು ಕರುಳಿಗೆ ಸಂಬಂಧಿಸಿದ ಸಮಸ್ಯೆಯೂ ಆಗಿರಬಹುಗದು. ಆದ್ದರಿಂದ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

