ಬೆಂಗಳೂರು: ಈ ಶೈಕ್ಷಣಿಕ ವರ್ಷದಿಂದ ತೊಡಗಿದಂತೆ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳಲ್ಲಿ ಸಂಬಂಧಪಟ್ಟ ಶಾಲೆ, ಕಾಲೇಜಿನ ಯುಡೈಸ್ ಕೋಡ್ ನಮೂದಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ.
ಈ ಮಹತ್ವದ ಕ್ರಮವನ್ನು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ನಿರ್ದೇಶನದ ಮೇರೆಗೆ ಅನುಸರಿಸಲಾಗುತ್ತಿದೆ.
ವಿದ್ಯಾರ್ಥಿಗಳ ಡಿಜಿಟಲ್ ಅಂಕಪಟ್ಟಿಗಳು ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿ ಮತ್ತು ಡಿಜಿಲಾಕರ್ನಲ್ಲಿ ಲಭ್ಯವಿರಲಿದ್ದು ಅವುಗಳಲ್ಲಿ ಅಪಾರ್ ಐಡಿ, ಆಧಾರ್ ಐಡಿ, ವಿದ್ಯಾರ್ಥಿಯ ಭಾವಚಿತ್ರದೊಂದಿಗೆ ಯುಡೈಸ್ ಕೋಡ್ ಕಡ್ಡಾಯವಾಗಿರಲಿದೆ.
ಅಂಕಪಟ್ಟಿಗಳ ಮೇಲೆ ಯುಡೈಸ್ ಕೋಡ್ ಇರುವುದರಿಂದ ಪಿಎಂ ವಿದ್ಯಾಲಕ್ಷ್ಮೀ ಪೋರ್ಟಲ್ ಮೂಲಕ ವಿದ್ಯಾರ್ಥಿ ವೇತನ, ನೇರ ಪ್ರಯೋಜನ ವರ್ಗಾವಣೆ, ಅಪಾರ್ ಐಡಿ ಬಳಕೆ ಹಾಗೂ ಶೈಕ್ಷಣಿಕ ಸಾಲಗಳನ್ನು ಪಡೆಯುವುದು ಸುಲಭವಾಗಲಿದೆ. ಈ ಡಿಜಿಟಲ್ ದಾಖಲೆಗಳನ್ನು ರಾಜ್ಯದ ಒಳಗೆ ಹಾಗೂ ಹೊರಗೆ ಉನ್ನತ ವ್ಯಾಸಂಗ ಹಾಗೂ ಉದ್ಯೋಗ ನೇಮಕಾತಿಗಳಿಗೆ ಅಧಿಕೃತ ದಾಖಲೆಯಾಗಲಿದೆ.
ಕೇಂದ್ರ ಸರ್ಕಾರವು ಶಾಲೆಗಳ ನಿಖರ ಮಾಹಿತಿ ಮತ್ತು ಆಡಳಿತಾತ್ಮಕ ಪಾರದರ್ಶಕತೆಗೆ ಈ ನಿಯಮವನ್ನು ಜಾರಿಗೊಳಿಸಿದೆ.

