ಬ್ರಹ್ಮಾವರ: ಶಾಲೆಯಲ್ಲಿ ಬಿಸಿಯೂಟ ತಯಾರಿಸುವಾಗ ಆಕಸ್ಮಿಕವಾಗಿ ಬಿಸಿ ನೀರು ಮೈಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಅಡುಗೆ ಸಿಬ್ಬಂದಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದಲ್ಲಿ ನಡೆದಿದೆ.
ಪೆಜಮಂಗೂರು ಗ್ರಾಮದ ಕೆ.ಪಿ.ಎಸ್. ಕೊಕ್ಕರ್ಣೆ ಶಾಲೆಯ ಬಿಸಿಯೂಟ ಅಡುಗೆ ಸಿಬ್ಬಂದಿ ಶಾರದಾ (54) ಮೃತಪಟ್ಟ ದುರದೃಷ್ಟಕರ ಮಹಿಳೆ.
ಕಳೆದ ಜುಲೈ 20 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ಶಾರದಾ ಅವರು ಶಾಲೆಯ ಅಡುಗೆ ಕೋಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಬಿಸಿಯೂಟದ ಪಾತ್ರೆಯಲ್ಲಿದ್ದ ನೀರು ಕುದಿದು ಹೊರಚೆಲ್ಲುತ್ತಿತ್ತು. ಈ ವೇಳೆ ಪಾತ್ರೆಯನ್ನು ಸರಿಪಡಿಸಿ ಇಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಾತ್ರೆಯಲ್ಲಿದ್ದ ಕುದಿಯುವ ಬಿಸಿ ನೀರು ಅವರ ಮೈಮೇಲೆ ಹಾಗೂ ಧರಿಸಿದ್ದ ನೈಲಾನ್ ಸೀರೆಗೆ ತಗುಲಿ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿದ್ದವು.
ಚಿಕಿತ್ಸೆ ಫಲಿಸದೆ ಕೊನೆಯುಸಿರು
ಘಟನೆ ಸಂಭವಿಸಿದ ತಕ್ಷಣ ಗಾಯಾಳುವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಮ್.ಸಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ 14ರಂದು ಬೆಳಗಿನ ಜಾವ 5:45 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
ಈ ದುರಂತ ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 54/2026, ಕಲಂ: 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

