ಬೆಂಗಳೂರು: ರಾಜ್ಯಾದ್ಯಂತ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಮುಖ್ಯ ಚುನಾವಣಾಧಿಕಾರಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ.
SIR ಪ್ರಕ್ರಿಯೆಯ ಭಾಗವಾಗಿ ರಾಜ್ಯದ ಮತದಾರರ ಪಟ್ಟಿಯಲ್ಲಿ ಸಮಗ್ರ ಪರಿಶೀಲನೆ ನಡೆಸಲಾಗಿದ್ದು, ಈವರೆಗೆ ಒಟ್ಟು 1,07,96,339 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆಘಾತಕಾರಿ ಹಾಗೂ ಮಹತ್ವದ ಮಾಹಿತಿ ಹೊರಬಿದ್ದಿದೆ. ಮೃತರ ಹೆಸರುಗಳು, ವಾಸಸ್ಥಳ ಬದಲಾವಣೆ ಹಾಗೂ ನಕಲಿ ನೋಂದಣಿಗಳನ್ನು ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿಯ ಈ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರುಗಳು ಬಿಟ್ಟುಹೋಗದಂತೆ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ನಿಖರವಾಗಿ ಗುರುತಿಸಿ ತೆಗೆದುಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಹಲವು ಹಂತಗಳಲ್ಲಿ ತೀವ್ರ ಪರಿಶೀಲನೆ ನಡೆಸುತ್ತಿದೆ.
ಮತದಾರರ ಪಟ್ಟಿಯಿಂದ ಹೆಸರುಗಳು ತೆರವಾಗಿರುವ ವಿಚಾರವಾಗಿ ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿಯೊಬ್ಬ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಕಾಯ್ದುಕೊಳ್ಳುವುದು ಮತ್ತು ತಾಂತ್ರಿಕವಾಗಿ ಅಥವಾ ಪ್ರಮಾದವಶಾತ್ ಹೆಸರು ಕೈತಪ್ಪಿದ್ದರೆ, ಅಗತ್ಯವಿದ್ದಲ್ಲಿ ಸೂಕ್ತ ಪ್ರಕ್ರಿಯೆಯ ಮೂಲಕ ಮರು ಸೇರ್ಪಡೆಗೆ ಅವಕಾಶ ಕಲ್ಪಿಸುವುದು ಆಯೋಗದ ಮುಖ್ಯ ಉದ್ದೇಶವಾಗಿದೆ ಎಂದು ಚುನಾವಣಾಧಿಕಾರಿಗಳು ಭರವಸೆ ನೀಡಿದ್ದಾರೆ.

