ಬ್ರಹ್ಮಾವರ: ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹1,50,000 ಹಣ ಪಡೆದು ವಂಚಿಸಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತ ದಿನೇಶ್ ಎಂಬುವರು ಫೇಸ್ಬುಕ್ನಲ್ಲಿ ಕಂಡ ವೆಬ್ಸೈಟ್ ಮೂಲಕ ವೀಸಾಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 20, 2026 ರಂದು ಚೆನ್ನೈನಿಂದ ವಿಷ್ಣುಮಣಿ ಹಾಗೂ ಶ್ರೀನಿವಾಸನ್ ಎಂಬ ಹೆಸರಿನಲ್ಲಿ ಕರೆ ಮಾಡಿದ ಆರೋಪಿಗಳು ವೀಸಾ ಕೊಡಿಸುವುದಾಗಿ ಭರವಸೆ ನೀಡಿ, ಒಟ್ಟು ₹1,50,000 ವೆಚ್ಚವಾಗಲಿದೆ ಎಂದು ತಿಳಿಸಿದ್ದರು.
ಇದನ್ನು ನಂಬಿದ ದಿನೇಶ್, ಜುಲೈ 2, 2026 ರಂದು ತಮ್ಮ ಮಗಳ ಖಾತೆಯಿಂದ ‘ವೃಷ್ಣಕುಪ್ಪ ಆರ್ಥಿ’ ಎಂಬ ಹೆಸರಿನ ಬ್ಯಾಂಕ್ ಖಾತೆಗೆ ₹75,000 ಹಾಗೂ ಅಳಿಯನ ಖಾತೆಯಿಂದ ‘ಅಜಿತ್ ಕುಮಾರ್’ ಎಂಬ ಹೆಸರಿನ ಖಾತೆಗೆ ₹75,000 ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದರು. ಹಣ ಸ್ವೀಕರಿಸಿದ ನಂತರ ವೀಸಾವನ್ನೂ ನೀಡದೆ, ಸಂಪರ್ಕಕ್ಕೂ ಸಿಗದೆ ಆರೋಪಿಗಳು ಮೋಸ ಮಾಡಿದ್ದಾರೆ. ಈ ಕುರಿತು ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 166/2026, ಕಲಂ 66(C) ಮತ್ತು 66(D) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

