ಉಡುಪಿ: ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಕರಡು ಅಧಿಸೂಚನೆಯ ಸಾಧಕ–ಬಾಧಕಗಳನ್ನು ಸಮಗ್ರವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದ 13 ಹಾಗೂ ಕುಂದಾಪುರದ 22 ಸೇರಿದಂತೆ ಒಟ್ಟು 35 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಬರಲಿವೆ. ಇದರಿಂದ ಕಾಡಂಚಿನ ಜನರ ಜೀವನೋಪಾಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ತೊಂದರೆಯಾಗುವ ಸಾಧ್ಯತೆ ಕುರಿತು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.
ಜನರಿಗೆ ತೊಂದರೆಯಾಗದಂತೆ ಭೌತಿಕ ಸರ್ವೇ ನಡೆಸಿ ವಾಸ್ತವಾಂಶಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಶಾಸಕರು ಒತ್ತಾಯಿಸಿದರು. ಪರಿಸರ ಸಂರಕ್ಷಣೆಯ ಜೊತೆಗೆ ಕಾಡಂಚಿನ ಜನರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

