ನವದೆಹಲಿ: ಸ್ಮಾರ್ಟ್ಫೋನ್ ಹಾಗೂ ಇಂಟರ್ನೆಟ್ ಸಂಪರ್ಕವಿಲ್ಲದೆಯೂ ಸುಲಭವಾಗಿ ಡಿಜಿಟಲ್ ಪಾವತಿಗಳನ್ನು ನಡೆಸಲು ಅನುಕೂಲವಾಗುವಂತೆ ದೇಶದ ಪ್ರಮುಖ ಫಿನ್ಟೆಕ್ ಸಂಸ್ಥೆಯಾದ ಫೋನ್ಪೇ, ‘PhonePe UPI 123Pay’ ಎಂಬ ನೂತನ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದೆ. ಕೀಪ್ಯಾಡ್ ಹಾಗೂ ಫೀಚರ್ ಫೋನ್ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ರೂಪಿಸಲಾಗಿದ್ದು, 2G ನೆಟ್ವರ್ಕ್ ಲಭ್ಯವಿರುವ ಪ್ರದೇಶಗಳಲ್ಲಿಯೂ ಇದು ಸರಾಗವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಗ್ರಾಮೀಣ ಹಾಗೂ ಇಂಟರ್ನೆಟ್ ಸೌಲಭ್ಯ ಸೀಮಿತವಾಗಿರುವ ಪ್ರದೇಶಗಳ ಜನರಿಗೆ ಡಿಜಿಟಲ್ ವಹಿವಾಟು ನಡೆಸುವುದು ಅತ್ಯಂತ ಸುಲಭವಾಗಲಿದೆ.
ಈ ಹೊಸ ಸೇವೆಯ ಮೂಲಕ ಬಳಕೆದಾರರು ಮತ್ತೊಬ್ಬರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವುದು ಮತ್ತು ವ್ಯಾಪಾರಿಗಳಿಗೆ ಪಾವತಿ ಮಾಡುವುದನ್ನು ಸರಳವಾಗಿ ನಿರ್ವಹಿಸಬಹುದು. ಕ್ಯಾಮೆರಾ ಹೊಂದಿರುವ ಫೀಚರ್ ಫೋನ್ಗಳಲ್ಲಿ QR ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದರೊಂದಿಗೆ ಬ್ಯಾಂಕ್ ಖಾತೆಯ ಶಿಲ್ಕು (ಬ್ಯಾಲೆನ್ಸ್) ಪರಿಶೀಲನೆ, ಖಾತೆ ನಿರ್ವಹಣೆ ಹಾಗೂ ಹಿಂದಿನ ವಹಿವಾಟುಗಳ ವಿವರಗಳನ್ನು ಪಡೆದುಕೊಳ್ಳುವ ಅವಕಾಶವೂ ಲಭ್ಯವಿರಲಿದೆ.
ದೇಶದಲ್ಲಿ ಸುಮಾರು 20 ಕೋಟಿಗೂ ಅಧಿಕ ಫೀಚರ್ ಫೋನ್ ಬಳಕೆದಾರರಿದ್ದು, ಈ ಬೃಹತ್ ಜಾಲವನ್ನು ಡಿಜಿಟಲ್ ಅರ್ಥವ್ಯವಸ್ಥೆಯೊಂದಿಗೆ ಜೋಡಿಸುವ ನಿಟ್ಟಿನಲ್ಲಿ ಫೋನ್ಪೇ ಈ ಮಹತ್ವದ ಹೆಜ್ಜೆ ಇಟ್ಟಿದೆ. ಥರ್ಡ್ ಪಾರ್ಟಿ ಆ್ಯಪ್ ಪ್ರೊವೈಡರ್ (TPAP) ವಿಭಾಗದಲ್ಲಿ ಫೀಚರ್ ಫೋನ್ಗಳಿಗೆ ಈ ಮಾದರಿಯ ಯುಪಿಐ ಸೌಲಭ್ಯ ತಂದ ಪ್ರಮುಖ ಸಂಸ್ಥೆಗಳಲ್ಲಿ ಫೋನ್ಪೇ ಮುಂಚೂಣಿಯಲ್ಲಿದೆ. ಈ ಸೇವೆಯನ್ನು ಹೆಚ್ಚಿನ ಜನರಿಗೆ ತಲುಪಿಸಲು ನೋಕಿಯಾ, ಎಚ್ಎಂಡಿ, ಲಾವಾ ಮತ್ತು ಐಟೆಲ್ ಸೇರಿದಂತೆ ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಆಯ್ದ ಫೋನ್ಗಳಲ್ಲಿ ಈ ಅಪ್ಲಿಕೇಶನ್ ಪ್ರೀ-ಬಂಡಲ್ ಆಗಿ ಸಿಗಲಿದೆ.
ಇನ್ನು ಮೊದಲ ಬಾರಿಗೆ ಸೇವೆಯನ್ನು ಸಕ್ರಿಯಗೊಳಿಸುವ ಗ್ರಾಹಕರ ನೆರವಿಗಾಗಿ ಫೋನ್ಪೇ ಎಐ-ಆಧಾರಿತ (AI) ಧ್ವನಿ ಸೌಲಭ್ಯವನ್ನು (Voice Helpline) ಪರಿಚಯಿಸಿದೆ. ಸೇವೆಯ ಸಕ್ರಿಯಗೊಳಿಸುವಿಕೆ ಮತ್ತು ಬಳಕೆ ವಿಧಾನದ ಬಗ್ಗೆ ಕನ್ನಡ ಸೇರಿದಂತೆ ಒಟ್ಟು 12 ಭಾರತೀಯ ಭಾಷೆಗಳಲ್ಲಿ ಹಂತ-ಹಂತದ ಧ್ವನಿ ಮಾರ್ಗದರ್ಶನ ದೊರೆಯಲಿದ್ದು, ಕನ್ನಡಿಗ ಬಳಕೆದಾರರಿಗೂ ಸಹ ಅತ್ಯಂತ ಸುಲಭವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಗೆ ತೆರೆದುಕೊಳ್ಳಲು ಇದು ನೆರವಾಗಲಿದೆ.

