ನವದೆಹಲಿ: ಕಳೆದ ಕೆಲ ಸಮಯದ ಹಿಂದೆ ದೇಶದೆಲ್ಲೆಡೆ ಅಯೋಧ್ಯೆ ಶ್ರೀರಾಮ ಮಂದಿರ (Ram Mandir)ದ ದೇಣಿಗೆಗೆ ಸಂಬಂಧಿಸಿದಂತೆ ಆರ್ಥಿಕ ಅಕ್ರಮ ನಡೆದ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಆಡಳಿತ ವೈಫಲ್ಯಗಳನ್ನು ತಡೆಯಲು ಮತ್ತು ಪಾರದರ್ಶಕತೆ ತರಲು ರಾಮ ಮಂದಿರ ಟ್ರಸ್ಟ್ ಪ್ರಮುಖ ನಿರ್ಧಾರವೊಂದಕ್ಕೆ ಬಂದಿದೆ.
ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ (Shri Ram Janmabhoomi Teerth Kshetra Trust) ಬುಧವಾರ (ಸೆ.2) ತನ್ನ ಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ (Jeetendra Mishra) ಅವರನ್ನು ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
ದೇಣಿಗೆ ದುರ್ಬಳಕೆಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಟ್ರಸ್ಟ್ನ ಆಡಳಿತ ವ್ಯವಸ್ಥೆಯನ್ನು ಬಲಪಡಿಸಲು ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ.
ಟ್ರಸ್ಟ್ನ ಆಡಳಿತಾತ್ಮಕ ನಿಯಮಗಳು, ನಿಬಂಧನೆಗಳು ಮತ್ತು ಸಿಇಒ ಅವರ ಅಧಿಕಾರ ವ್ಯಾಪ್ತಿಯನ್ನು ಸ್ಪಷ್ಟವಾಗಿ ನಿರ್ವಹಿಸಲು ತನ್ನ ಟ್ರಸ್ಟ್ ಡೀಡ್ಗೆ (Trust Deed) ತಿದ್ದುಪಡಿ ತರಲು 12 ಅಂಶಗಳ ಕಾರ್ಯಸೂಚಿಯೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.
ಯಾರು ಇವರು ಜಿತೇಂದ್ರ ಮಿಶ್ರಾ?
ಜಿತೇಂದ್ರ ಮಿಶ್ರಾ ಅವರು ಡಿಸೆಂಬರ್ 6, 1986 ರಂದು ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರ್ಪಡೆಯಾದರು. 38ಕ್ಕೂ ಹೆಚ್ಚು ವರ್ಷಗಳ ಶ್ಲಾಘನೀಯ ಸೇವೆ ಸಲ್ಲಿಸಿರುವ ಇವರು ಫೈಟರ್ ಕಾಂಬ್ಯಾಟ್ ಲೀಡರ್ ಮತ್ತು ಎಕ್ಸ್ಪೆರಿಮೆಂಟಲ್ ಟೆಸ್ಟ್ ಪೈಲಟ್ ಆಗಿದ್ದು, 3,000ಕ್ಕೂ ಹೆಚ್ಚು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ.
ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA), ಬೆಂಗಳೂರಿನ ಏರ್ ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್, ಅಮೆರಿಕದ ಏರ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜ್ ಹಾಗೂ ಯುಕೆ ಸಂಸ್ಥೆಯ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್ನ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಫೈಟರ್ ಸ್ಕ್ವಾಡ್ರನ್ನ ಕಮಾಂಡಿಂಗ್ ಆಫೀಸರ್, ASTE ನ ಚೀಫ್ ಟೆಸ್ಟ್ ಪೈಲಟ್ ಮತ್ತು ಎರಡು ಮುಂಚೂಣಿ ವಾಯುನೆಲೆಗಳ ಏರ್ ಆಫೀಸರ್ ಕಮಾಂಡಿಂಗ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ ವಾಯುಪಡೆ ಪ್ರಧಾನ ಕಚೇರಿಯಲ್ಲಿ ಸಹಾಯಕ ವಾಯುಪಡೆ ಮುಖ್ಯಸ್ಥರಾಗಿಯೂ (ಯೋಜನೆಗಳು) ಸೇವೆ ಸಲ್ಲಿಸಿದ್ದಾರೆ.

