ಉಡುಪಿಯ ಪ್ರಸಿದ್ಧ ವಿಟ್ಲ ಪಿಂಡಿ ಹಾಗೂ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಮತ್ತು ಸುಗಮ ಸಂಚಾರ ನಿರ್ವಹಣೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ಭಾರಿ ಬಂದೋಬಸ್ತ್ ಕೈಗೊಂಡಿದೆ. ನಗರದಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಉತ್ಸವವನ್ನು ಶಾಂತಿಯುತವಾಗಿ ನಡೆಸಲು ವ್ಯಾಪಕ ಭದ್ರತಾ ಕ್ರಮಗಳನ್ನು ರೂಪಿಸಲಾಗಿದೆ.
ಈ ಬಾರಿ ಬಂದೋಬಸ್ತ್ಗಾಗಿ ದೊಡ್ಡ ಮಟ್ಟದ ಪೊಲೀಸ್ ಪಡೆಯನ್ನೇ ನಿಯೋಜಿಸಲಾಗಿದೆ. ಒಟ್ಟು ಒಬ್ಬರು ಪೊಲೀಸ್ ಅಧೀಕ್ಷಕರು (SP), ಒಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು (Addl. SP), ಇಬ್ಬರು ಡಿವೈಎಸ್ಪಿಗಳು, 6 ಇನ್ಸ್ಪೆಕ್ಟರ್ಗಳು, 25 ಸಬ್ ಇನ್ಸ್ಪೆಕ್ಟರ್ಗಳು, 35 ಎಎಸ್ಐಗಳು ಹಾಗೂ 186 ಹೆಡ್ ಕಾನ್ಸ್ಟೇಬಲ್/ಕಾನ್ಸ್ಟೇಬಲ್/ಮಹಿಳಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದಾರೆ. ಇದರೊಂದಿಗೆ 50 ಗೃಹರಕ್ಷಕ ಸಿಬ್ಬಂದಿ, 1 ಕೆಎಸ್ಆರ್ಪಿ ತುಕಡಿ, 9 ಡಿಎಆರ್ ತುಕಡಿಗಳು, 3 ಅಗ್ನಿಶಾಮಕ ದಳದ ತಂಡಗಳು, 2 ಆಂಬ್ಯುಲೆನ್ಸ್ ಹಾಗೂ 3 ಡ್ರೋನ್ ತಂಡಗಳನ್ನು ಹೆಚ್ಚುವರಿ ಭದ್ರತೆಗಾಗಿ ಕಣಕ್ಕಿಳಿಸಲಾಗಿದೆ.
ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ದಟ್ಟಣೆಯನ್ನು ನಿಯಂತ್ರಿಸಲು ನಗರದ 7 ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಂ.ಜಿ.ಎಂ. ಮೈದಾನ, ಶ್ರೀ ಕೃಷ್ಣ ಮಠದ ರಾಜಾಂಗಣ, ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ, ಬೀಡಿನಗುಡ್ಡೆ ಮೈದಾನ ಹಾಗೂ ಕ್ರೀಡಾಂಗಣ, ವಿದ್ಯೋದಯ ಶಾಲೆ ಮತ್ತು ಮಾಂಡವಿ ರಾಯಲ್ ಗಾರ್ಡನ್ ಪಾರ್ಕಿಂಗ್ ಸ್ಥಳಗಳನ್ನು ಸಾರ್ವಜನಿಕರ ವಾಹನ ನಿಲುಗಡೆಗೆ ಗುರುತಿಸಲಾಗಿದೆ.
ಜನಸಂದಣಿಯನ್ನು ನಿಯಂತ್ರಿಸಲು ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ‘ಅಕ್ಕಪಡೆ’ ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ನಗರದ 45 ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿರಂತರ ಕಣ್ಗಾವಲು ಇರಿಸಲಾಗಿದೆ. ಜೊತೆಗೆ 12 ಸಾರ್ವಜನಿಕ ಘೋಷಣಾ (Public Address) ವ್ಯವಸ್ಥೆಗಳನ್ನು ಬಳಸಲಾಗುತ್ತಿದೆ. ಅಪರಾಧ ಕೃತ್ಯ ತಡೆಯಲು ಫಿಂಗರ್ಪ್ರಿಂಟ್ ಸ್ಕ್ಯಾನರ್ಗಳು ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಸೂಕ್ಷ್ಮ ನಿಗಾ ವಹಿಸಲಾಗುತ್ತಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ.

