ಉಡುಪಿ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಲು ಯತ್ನಿಸಿದ ಹಾಗೂ ನ್ಯಾಯಾಲಯದ ಕಲಾಪಕ್ಕೆ ಅಡಚಣೆ ಉಂಟುಮಾಡಿದ ಗಂಭೀರ ಪ್ರಕರಣವೊಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳಿಗೆ ಜಾಮೀನು ನೀಡಲು ಬಂದಿದ್ದ ವ್ಯಕ್ತಿಯೊಬ್ಬ ನಕಲಿ ಆಧಾರ್ ಕಾರ್ಡ್ ಹಾಜರುಪಡಿಸಿದ್ದು, ಅಧಿಕಾರಿಗಳ ಜಾಗರೂಕತೆಯಿಂದಾಗಿ ಕೃತ್ಯ ತಕ್ಷಣವೇ ಬಯಲಾಗಿದೆ.
ಪ್ರಕರಣದ ವಿವರಗಳ ಪ್ರಕಾರ, ದಿನಾಂಕ 31/08/2026 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಕೆ. ಉಮ್ಮರಬ್ಬ ಮೊಯಿದ್ದಿನ್ ಎಂಬುವವರು 2ನೇ ಹೆಚ್ಚುವರಿ ಹಿರಿಯ ನ್ಯಾಯಾಲಯದ ಸಿಸಿ ಸಂಖ್ಯೆ 205/2026 ರ ಪ್ರಕರಣದಲ್ಲಿನ ಮೊದಲನೇ ಆರೋಪಿ ರಮಾವತ್ ಶ್ರೀನು ಹಾಗೂ ನಾಲ್ಕನೇ ಆರೋಪಿ ರಮಾವತ್ ಮೋಹನ್ ಕುಮಾರ್ ಅವರಿಗೆ ಜಾಮೀನು ನೀಡಲು ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ನ್ಯಾಯಾಲಯದ ಆಡಳಿತ ವಿಭಾಗದ ಹಿರಿಯ ಶಿರಸ್ತೆದಾರರಾದ ಸೋಮಪ್ಪ ಶಿರಸ್ತೆದಾರರು ಜಾಮೀನುದಾರರ ಮಾಹಿತಿಯನ್ನು ಆಧಾರ್ ಪರಿಶೀಲನಾ ಜಾಲತಾಣದಲ್ಲಿ ಪರಿಶೀಲಿಸಿದರು.
ಆರಂಭಿಕ ಆಧಾರ್ ಪರಿಶೀಲನೆ ವೇಳೆ ಉಮ್ಮರಬ್ಬ ಮೊಯಿದ್ದಿನ್ ಅವರು ಯಾವುದೇ ಕೇಸಿನಲ್ಲಿ ಜಾಮೀನು ನಿಂತಿರುವುದು ವ್ಯವಸ್ಥೆಯಲ್ಲಿ ಗೋಚರಿಸಿರಲಿಲ್ಲ. ಆದರೆ, ಇವರು ಈ ಹಿಂದೆ ಹಲವು ಬಾರಿ ನ್ಯಾಯಾಲಯಕ್ಕೆ ಜಾಮೀನುದಾರರಾಗಿ ಬಂದಿರುವುದು ಶಿರಸ್ತೆದಾರರ ಗಮನದಲ್ಲಿದ್ದಿದ್ದರಿಂದ ಸಂಶಯಗೊಂಡು ದಾಖಲೆಗಳನ್ನು ಪುನಃ ಸೂಕ್ಷ್ಮವಾಗಿ ಪರಿಶೀಲಿಸಲಾಯಿತು. ಈ ಜಾಗರೂಕ ಪರಿಶೀಲನೆಯಲ್ಲಿ ಜಾಮೀನುದಾರರು ಸಲ್ಲಿಸಿದ್ದ ಆಧಾರ್ ಕಾರ್ಡ್ ಸಂಪೂರ್ಣವಾಗಿ ನಕಲಿ ಎಂಬುದು ದೃಢಪಟ್ಟಿತು.
ನ್ಯಾಯಾಲಯವನ್ನು ವಂಚಿಸುವ ಮತ್ತು ಕಲಾಪಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ನಕಲಿ ಆಧಾರ್ ಕಾರ್ಡ್ ತಯಾರಿಸಿರುವುದು ಕಂಡುಬಂದ ತಕ್ಷಣವೇ ಶಿರಸ್ತೆದಾರರು ಈ ವಿಷಯವನ್ನು ಗೌರವಾನ್ವಿತ ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ಸೋಮಪ್ಪ ಶಿರಸ್ತೆದಾರರು ನೀಡಿದ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2026 ರಂತೆ ಬಿಎನ್ಎಸ್ (BNS) ಕಾಯ್ದೆಯ ಕಲಂ 319(2), 336(3), 318(4), 229(1), 340(2) ಹಾಗೂ ಆಧಾರ್ ಕಾಯ್ದೆಯ ಕಲಂ 35 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

