ಉಡುಪಿ: ಪರಿಸರ ಸ್ನೇಹಿಯಾಗಿ ಗೌರಿ–ಗಣೇಶ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಕರೆ ನೀಡಿದರು.
ಮಣಿಪಾಲದ ರಜತಾದ್ರಿಯಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಮೂರ್ತಿಗಳ ಬಳಕೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಕೃತಕ ಅಥವಾ ತಾತ್ಕಾಲಿಕ ವಿಸರ್ಜನಾ ತೊಟ್ಟಿಗಳಲ್ಲೇ ವಿಸರ್ಜಿಸುವಂತೆ ಸಲಹೆ ನೀಡಿದರು. ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ತಡೆಯಲು ನಿರಂತರ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

