ಬೆಂಗಳೂರು: ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ‘ಪ್ರತಿಭಾ ಕಾರಂಜಿ’ ಹಾಗೂ ‘ಕಲೋತ್ಸವ-2026’ ಆಚರಣೆಯ ಅಧಿಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರತರಲು ಆಯೋಜಿಸಲಾಗುವ ಈ ಸ್ಪರ್ಧೆಗಳು ಸೆಪ್ಟೆಂಬರ್ನಿಂದ ಶಾಲಾ ಮಟ್ಟದಲ್ಲಿ ಆರಂಭಗೊಂಡು ಡಿಸೆಂಬರ್ನಲ್ಲಿ ರಾಜ್ಯ ಮಟ್ಟದಲ್ಲಿ ಮುಕ್ತಾಯಗೊಳ್ಳಲಿವೆ.
ಹಂತವಾರ ಸ್ಪರ್ಧಾ ವೇಳಾಪಟ್ಟಿ:
- ಶಾಲಾ ಹಂತ: ಸೆಪ್ಟೆಂಬರ್ 2ನೇ ವಾರದೊಳಗೆ
- ಕ್ಲಸ್ಟರ್ ಹಂತ: ಸೆಪ್ಟೆಂಬರ್ 4ನೇ ವಾರದೊಳಗೆ
- ತಾಲೂಕು ಹಂತ: ನವೆಂಬರ್ 2ನೇ ವಾರದೊಳಗೆ
- ಜಿಲ್ಲಾ ಹಂತ: ನವೆಂಬರ್ 4ನೇ ವಾರದೊಳಗೆ
- ರಾಜ್ಯ ಹಂತ: ಡಿಸೆಂಬರ್-2026 ರೊಳಗೆ ಪೂರ್ಣಗೊಳ್ಳಬೇಕು
ಈ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಗರಿಷ್ಠ ಎರಡು ವಿಷಯಗಳಲ್ಲಿ ಹಾಗೂ ಸಾಮೂಹಿಕ ವಿಭಾಗದಲ್ಲಿ ಕೇವಲ ಒಂದು ವಿಷಯದಲ್ಲಿ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ, ಸ್ಪರ್ಧೆಯ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

