ಬ್ರಹ್ಮಾವರ: ಹೆತ್ತ ತಾಯಿಯನ್ನೇ ಅನಾಥವಾಗಿ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ ಅಮಾನವೀಯ ಘಟನೆಯೊಂದು ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.ಇಲ್ಲಿನ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ಅಪರಿಚಿತ ವೃದ್ಧೆಯೊಬ್ಬರು ದಿಕ್ಕು ತೋಚದೆ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೇಣೈ ಅವರು ಗಮನಿಸಿದ್ದಾರೆ. ತಕ್ಷಣವೇ ಅವರು ಈ ಕುರಿತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ನಿತ್ಯಾನಂದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿ ಸಿಬ್ಬಂದಿಯ ನೆರವಿನೊಂದಿಗೆ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಣ್ಣೀರಿಟ್ಟ ವೃದ್ಧೆ:
ಆಸ್ಪತ್ರೆಯ ದಾಖಲಾತಿ ಪ್ರಕ್ರಿಯೆ ವೇಳೆ ವೃದ್ಧೆ ತಮ್ಮ ಹೆಸರು ಸರಸ್ವತಿ (70) ಹಾಗೂ ತಮಿಳುನಾಡಿನ ತಿರುವಳ್ಳೂವೂರು ನಿವಾಸಿ ಎಂದು ತಿಳಿಸಿದ್ದಾರೆ. ತಮ್ಮ ಸ್ವಂತ ಮಗನೇ ತಮ್ಮನ್ನು ಕಾರಿನಲ್ಲಿ ಕರೆತಂದು ಈ ಅಪರಿಚಿತ ಸ್ಥಳದಲ್ಲಿ ಬಿಟ್ಟು ತೆರಳಿದ್ದಾನೆ ಎಂದು ಅವರು ಕಣ್ಣೀರಿಡುತ್ತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಘಟನೆಯ ಕುರಿತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

