ಕುಂದಾಪುರ: ಕರಾವಳಿ ಕರ್ನಾಟಕ ಭಾಗದ ಯುವಜನತೆಗೆ ವ್ಯಾಪಕ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕುಂದಾಪುರದ ಮೂಡಲಕಟ್ಟೆಯ ತಾಂತ್ರಿಕ ವಿದ್ಯಾಲಯದ (ಎಂಐಟಿ) ಆವರಣದಲ್ಲಿ ಸೆಪ್ಟೆಂಬರ್ 17 ಮತ್ತು 18ರಂದು ಬೃಹತ್ ಉದ್ಯೋಗ ಮೇಳ ‘ಜಾಬ್ ಎಕ್ಸ್ಪ್ರೆಸ್ – 2026’ ಆಯೋಜಿಸಲಾಗಿದೆ. ಎಂಐಜೆ ಶಿಕ್ಷಣ ಸಂಸ್ಥೆಗಳು, ಎಂಐಟಿ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಮೈಕ್ರೋಸಾಫ್ಟ್ ಮತ್ತು ಮೈಟಿ (MeitY) ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
35ಕ್ಕೂ ಹೆಚ್ಚು ಕಂಪನಿಗಳು ಭಾಗಿ, 5,000+ ಉದ್ಯೋಗಾವಕಾಶ
ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂಐಜೆ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಶಂಕರನಾರಾಯಣ ಭಟ್, ಈ ಉದ್ಯೋಗ ಮೇಳದಲ್ಲಿ 35ಕ್ಕೂ ಅಧಿಕ ಪ್ರಮುಖ ಕಂಪನಿಗಳು ಭಾಗವಹಿಸಲಿದ್ದು, ಸುಮಾರು 5,000ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲಿವೆ ಎಂದು ತಿಳಿಸಿದರು. ಇದು ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳು, ಪದವೀಧರರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಮುಂಚೂಣಿ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿ ಸೂಕ್ತ ವೃತ್ತಿ ಅವಕಾಶ ಪಡೆಯಲು ಅತ್ಯುತ್ತಮ ವೇದಿಕೆಯಾಗಲಿದೆ. ಸಂದರ್ಶನ ಪ್ರಕ್ರಿಯೆಯಲ್ಲಿ ನುವಿನ್ ಗ್ಲೋಬಲ್ ಸರ್ವಿಸಸ್ ಪ್ರೈವೇಟ್, ಟಾಟಾ ವಿಸ್ತಾನ್, ಟಾಟಾ ಎಲೆಕ್ಟ್ರಾನಿಕ್ಸ್, ವಿಪ್ರೋ ಕವಾಸಕಿ ಹಾಗೂ ವಿನ್ ಮ್ಯಾನ್ ಸಾಫ್ಟ್ವೇರ್ ಸೇರಿದಂತೆ ಹಲವು ದೈತ್ಯ ಕಂಪನಿಗಳು ಪಾಲ್ಗೊಳ್ಳಲಿವೆ.
ವೇಳಾಪಟ್ಟಿ ಹಾಗೂ ನೋಂದಣಿ ಪ್ರಕ್ರಿಯೆ
ಮೇಳದ ಮೊದಲ ದಿನವಾದ ಸೆಪ್ಟೆಂಬರ್ 17ರಂದು ‘ಮೈಕ್ರೋಸಾಫ್ಟ್ ಜಾಬ್ ರೆಡಿನೆಸ್ ಬೂಟ್ ಕ್ಯಾಂಪ್’ ನಡೆಯಲಿದ್ದು, ಸೆಪ್ಟೆಂಬರ್ 18ರಂದು ನೇರ ಉದ್ಯೋಗ ಮೇಳ ನಡೆಯಲಿದೆ. ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಯಾವುದೇ ಪದವಿ ಪಡೆದ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು. ಮೇಳದಲ್ಲಿ ಪಾಲ್ಗೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಪೂರ್ವ ನೋಂದಣಿ ಕಡ್ಡಾಯವಾಗಿದ್ದು, ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.imjinstitutions.com ಮೂಲಕ ಆನ್ಲೈನ್ನಲ್ಲಿ ಉಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮೇಳ ನಡೆಯುವ ಸ್ಥಳದಲ್ಲೇ ನೇರ ನೋಂದಣಿಗೂ (Spot Registration) ಅವಕಾಶ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮೂಡಲಕಟ್ಟೆ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಹಾಗೂ ಎಂಐಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್ ಉಪಸ್ಥಿತರಿದ್ದರು.

